ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಅಮರಾವತಿ ಗ್ರಾಮದ ಬಳಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಸ್ಥಾಪನೆಯಾಗುವುದರಿಂದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂ.ಗ್ರಾಮಾಂತರ ಜಿಲ್ಲೆಗಳ ವಿದ್ಯಾರ್ಥಿಗಳ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕೆ ಸಾಕಷ್ಟು ಅನುಕೂಲವಾಗಲಿದ್ದು, ವಿವಿ ನಿರ್ಮಾಣಕ್ಕಾಗಿ ಈಗಾಗಲೇ 110.25ಎಕರೆ ಸರಕಾರಿ ಜಮೀನನ್ನು ವಿವಿಗೆ ಹಸ್ತಾಂತರಿಸಲಾಗಿದೆ ಹಾಗೂ 61.15 ಎಕರೆ ಜಾಗವನ್ನು ಭೂ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಅಮರಾವತಿ ಬಳಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಅವರು ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿ ಅಮರಾವತಿ ಬಳಿ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧರಿಸಲಾಗಿದೆ,ಇಲ್ಲಿ ವಿವಿ ನಿರ್ಮಾಣಕ್ಕೆ ಯಾವುದೇ ರೀತಿಯ ನೀರಿನ ಸಮಸ್ಯೆ ಇರುವುದಿಲ್ಲ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವಿದ್ದು ಅತ್ಯಂತ ಪ್ರಶಾಂತ ವಾತಾವರಣ ಇದೆ. ಜಿಂಕೆ, ನವಿಲು ಸೇರಿದಂತೆ ಇನ್ನಿತರ ವನ್ಯಪ್ರಾಣಿಗಳು ಸಹ ವಾಸವಿದ್ದು, ನಗರದ ಒತ್ತಡಗಳಿಂದ ದೂರವಾದ ಹಸಿರು ವಾತಾವರಣದಲ್ಲಿ ಉತ್ತಮ ಕ್ಯಾಂಪಸ್ ಇಲ್ಲಿ ತಲೆ ಎತ್ತಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಇಲ್ಲಿನ ವನ್ಯ ಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಬೆಂಗಳೂರು ಉತ್ತರ ವಿವಿ ಉಪ ಕುಲಪತಿ ಕೆಂಪರಾಜು ಮಾತನಾಡಿ ಬೆಂಗಳೂರು ವಿವಿ ವಿಭಜನೆಯಾದ ನಂತರ ಬೆಂಗಳೂರು ಉತ್ತರ ವಿವಿಯ ಚಟುವಟಿಕೆಗಳು ಪ್ರಸ್ತುತ ಕೋಲಾರ ಜಿಲ್ಲಾ ಕೇಂದ್ರದಿಂದ ನೆಡೆಯುತ್ತಿವೆ ಈಗ ಅಮರಾವತಿ ಬಳಿ ಗುರ್ತಿಸಿರುವ ಸ್ಥಳದಲ್ಲಿ ವಿವಿ ಆರಂಭವಾದಲ್ಲಿ ಚಿಕ್ಕಬಳ್ಳಾಪುರ , ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ಬೆಂಗಳೂರು ಉತ್ತರ ವಿವಿಯ ಆಡಳಿತ ಕಟ್ಟಡಗಳು ಸೇರಿದಂತೆ ಎಲ್ಲ ಕಚೇರಿಗಳು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಕಾರ್ಯ ನಿರ್ವಹಿಸಲಿವೆ. ಇದಕ್ಕಾಗಿ 172 ಎಕರೆ ಪ್ರದೇಶವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಜಿಲ್ಲಾಡಳಿತ ಮೀಸಲಿಟ್ಟಿದೆ. ಈ ಪೈಕಿ 110.25 ಎಕರೆ ಪ್ರದೇಶ ಸರ್ಕಾರಿ ಜಮೀನನ್ನು ಹಸ್ತಾಂತರಿಸಲಾಗಿದೆ,61.15 ಎಕರೆ ಜಾಗವನ್ನು ನೇರ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ. ವಿಶ್ವ ವಿದ್ಯಾಲಯದ ಕಾಮಗಾರಿಗಳು ವಿವಿಧ ಸೆಕ್ಟರ್ ಗಳಲ್ಲಿ ನಡೆಯಲಿದ್ದು, ಕಾಮಗಾರಿಗಳು ಎಲ್ಲವೂ ಸಂಪೂರ್ಣವಾಗಿ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಶಿಕ್ಷಣ ಸೌಲಭ್ಯಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿವಿಯ ರಿಜಿಸ್ಟ್ರಾರ್ ವೆಂಕಟೇಶ್ ಅವರು ಮಾತನಾಡಿ ಭೂ ಮಾಲಿಕರಿಂದ 61.15 ಎಕರೆ ಜಾಗವನ್ನು ನೇರ ಖರೀದಿ ಮಾಡುವ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಲೆ ನಿರ್ಧರಣಾ ಸಮಿತಿಯ ಸಭೆ ನಡೆಸಿ ಬೆಲೆ ನಿಗಧಿಪಡಿಸಲಾಗಿದೆ ಜೊತೆಗೆ ಭೂ ಸ್ವಾಧೀನಕ್ಕಾಗಿ 23ಕೋಟಿ ಹಣವನ್ನ ಭೂ ಸ್ವಾಧೀನ ಅಧಿಕಾರಿಯವರ ಖಾತೆಗೆ ಜಮೆ ಮಾಡಲಾಗಿದೆ ಅಲ್ಲದೆ ವಿವಿ ನಿರ್ಮಾಣ ಸಂಬಂಧ ವಿವರವಾದ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಕ್ರಮವಹಿಸಲಾಗುತ್ತಿದ್ದು ಸರ್ಕಾರದ ಅನುಮೋದನೆ ಪಡೆದು ವಿವಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯರಾದ ಸಂತೋಷ್, ದೇವರಾಜು, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಶಿಡ್ಲಘಟ್ಟ ತಾಲೂಕಿನ ತಹಶಿಲ್ದಾರ್ ರಾಜೀವ್, ಭೂ ದಾಖಲಾತಿ ಅಧಿಕಾರಿ ಡಿ.ರವಿಕುಮಾರ್ ಯಾದವ್, ಅಮರಾವತಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಣ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..