
ಬೆಂ.ಗ್ರಾ.ಜಿಲ್ಲೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2021-2022ನೇ ಸಾಲಿನ “ಆಧಾರ” ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲ್ಲೂಕುಗಳ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಇದಕ್ಕಾಗಿ ರೂ.1,00,000-00 ಸಾಲ ಸೌಲಭ್ಯ ಹಾಗೂ ಇದರಲ್ಲಿ 50% ಸಬ್ಸಿಡಿ ನೀಡಲಾಗುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ವಿಕಲಚೇತನರು ನಿಗದಿತ ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ತಮ್ಮ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ., ತಾಲ್ಲೂಕು ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ. ಹಾಗೂ ಜಿಲ್ಲಾ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಸಲ್ಲಿಸಬಹುದಾಗಿದೆ.
ಫಲಾನುಭವಿಗೆ ಶೇಕಡ 40 ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆ ಇರತಕ್ಕದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಫಲಾನುಭವಿಗಳ ಆದಾಯ ವರ್ಷಕ್ಕೆ ರೂ.11,500-00ಗಳಿಗಿಂತ ಕಡಿಮೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ ರೂ.24,000/-ಮೀರದಂತೆ ಇರತಕ್ಕದ್ದು. (ತಹಶೀಲ್ದಾರ್‌ರವರಿಂದ ಪಡೆದ 2020-21ನೇ ಸಾಲಿನ ಮೂಲ ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು.)
ಫಲಾನುಭವಿಗಳು ಅಕ್ಷರಸ್ಥರಾಗಿರಬೇಕು.(ವ್ಯಾಸಂಗ ದೃಢೀಕರಣ ಪತ್ರ ಲಗತ್ತಿಸಬೇಕು.) ಫಲಾನುಭವಿಗೆ ಸಣ್ಣ ವ್ಯಾಪಾರ ಮಾಡುವ ನೈಪುಣ್ಯತೆ ಇರಬೇಕು. ಅಂಗವಿಕಲ ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿ 10 ವರ್ಷಗಳಿಂದ ವಾಸವಾಗಿರುವ ಬಗ್ಗೆ ತಹಶೀಲ್ದಾರ್ ರವರಿಂದ ಪಡೆದ ದೃಢೀಕರಣ ಅಥವಾ ಕರ್ನಾಟಕದಲ್ಲಿ 10 ವರ್ಷಗಳಿಂದ ವ್ಯಾಸಂಗ ಮಾಡಿದ ವಿದ್ಯಾಭ್ಯಾಸದ ದೃಢೀಕರಣ ಪತ್ರ ಒದಗಿಸಬೇಕು. ಫಲಾನುಭವಿಗಳು ಸರ್ಕಾರಕ್ಕೆ ಸುಸ್ತಿದಾರರಾಗಿರಬಾರದು. (ಬ್ಯಾಂಕ್‍ಗಳಿಂದ ಬೇಬಾಕಿ ಪ್ರಮಾಣ ಪತ್ರ ಲಗತ್ತಿಸಬೇಕು.) ಫಲಾನುಭವಿಗೆ ಕನಿಷ್ಠ 18 ರಿಂದ 55 ವರ್ಷದೊಳಗಿರಬೇಕು. ಫಲಾನುಭವಿಗಳು ನಿರುದ್ಯೋಗಿಯಾಗಿರಬೇಕು.
ಅಂಗವಿಕಲತೆ ಹೊಂದಿರುವ ಬಗ್ಗೆ ಸಂಬಂಧಪಟ್ಟ ವೈದ್ಯಕೀಯ ಪ್ರಾಧಿಕಾರದಿಂದ ಪಡೆದ ಅಂಗವಿಕಲರ ಗುರುತಿನ ಚೀಟಿ/ ಯು.ಡಿ.ಐ.ಡಿ. ಕಾರ್ಡ್ ಜೆರಾಕ್ಸ್ ಪ್ರತಿ. ಈ ಹಿಂದೆ ಆಧಾರ/ಎನ್.ಹೆಚ್.ಎಫ್.ಡಿ.ಸಿ./ ಹಿಂದುಳಿದ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಇತರೆ ಯಾವುದೇ ಸರ್ಕಾರ/ ಸಂಘ-ಸಂಸ್ಥೆಗಳಿಂದ ಸಾಲ ಸೌಲಭ್ಯ ಪಡೆದಿರಬಾರದು. ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಬ್ಯಾಂಕ್‍ನ ಉಳಿತಾಯ ಖಾತೆ ಸಂಖ್ಯೆ, ಐ.ಎಫ್.ಎಸ್.ಸಿ. ಕೋಡ್ ಇರುವ ಪಾಸ್ ಪುಸ್ತಕದ ನಕಲು ಪ್ರತಿ ಲಗತ್ತಿಸಬೇಕು. ಆಧಾರ್ ಕಾರ್ಡ್ ನಕಲು ಪ್ರತಿ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಬಯಸುವ ವಿಕಲಚೇತನರು ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತಿಯ ವಿ.ಆರ್.ಡಬ್ಲ್ಯೂ./ ತಾಲ್ಲೂಕು ಪಂಚಾಯತಿಯ ಎಂ.ಆರ್.ಡಬ್ಲ್ಯೂ. ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 03, ನೆಲಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೂ.ಸಂ.: 080-29787442,
ವಿಕಲಚೇತನರ ಸಹಾಯವಾಣಿ ದೂ.ಸಂ.: 080-29787441 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						