ದೊಡ್ಡಬಳ್ಳಾಪುರ: ತೂಬಗೆರೆ ಹೋಬಳಿಯ ಕುರುವಿಗೆರೆ ಗ್ರಾಮದಲ್ಲಿ ವಿವಾದಕ್ಕೆ ಕಾರಣವಾಗಿದ್ದ ʼಅಸ್ಪ್ರಶ್ಯತೆʼ ಆಚರಣೆ ಆರೋಪ ವಿಚಾರ ಸುಖ್ಯಾಂತ್ಯ ಕಂಡಿದೆ.
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರು ಗುರುವಾರ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಚನ್ನಕೇಶವ ದೇವಾಲಯದ ಆವರಣದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದರು.
ತಹಶೀಲ್ದಾರ್ ಸಮ್ಮುಖದಲ್ಲಿ ದಲಿತರು ದೇವಾಲಯ ಒಳಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಗ್ರಾಮದ ಸವರ್ಣೀಯರು ಕೂಡ ದಲಿತರಿಗೆ ದೇವಾಲಯದೊಳಗೆ ಮುಕ್ತಆಹ್ವಾನ ನೀಡಿದ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ತಹಶೀಲ್ದಾರ್ ಅವರು, ಅಸ್ಪ್ರಶ್ಯತೆ ಆಚರಣೆ ಸಂವಿಧಾನಬಾಹಿರ. ಇದನ್ನು ನಿಷೇಧಿಸಲಾಗಿದೆ. ಕುರುವಿಗೆರೆ ಗ್ರಾಮದಲ್ಲಿ ಅಸ್ಪ್ರಶ್ಯತೆ ನಡೆದ ಆರೋಪವಿದೆ ಇದು ನಿಜವೇ ಎಂದು ಪ್ರಶ್ನಿಸಿದರು. ಈ ವೇಳೆ ಕೆಲ ದಲಿತ ಮಹಿಳೆಯರು. ಯುವಕರು, ದೇವಾಲಯದೊಳಗೆ ಪ್ರವೇಶವಿಲ್ಲ ಎಂದು ಆರೋಪಿಸಿದರು.
ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಸವರ್ಣೀಯ ಮುಖಂಡರು, ನಾವು ಎಂದಿಗೂ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿಲ್ಲ. ಅವರು ಬಂದೂ ಇಲ್ಲ. ಈಗ ಕೆಲ ವೈಯಕ್ತಿಕ, ರಾಜಕೀಯ ಕಾರಣಗಳಿಂದ ಈ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಇದೇ ವಿಚಾರದಲ್ಲಿ ಕೆಲಕಾಲ ಎರಡೂ ಕಡೆಯವರಿಗೆ ಮಾತಿನ ಚಕಮಕಿ ನಡೆಯಿತು.
ಎರಡೂ ಕಡೆಯವರ ಮಾತುಗಳನ್ನು ಆಲಿಸಿದ ತಹಶೀಲ್ದಾರ್, ದೇವಾಲಯ ಪ್ರವೇಶ ಸಾರ್ವಜನಿಕರಿಗೆ ಮುಕ್ತವಾಗಿರಬೇಕು. ಇದಕ್ಕೆ ಯಾರೂ ಅಡ್ಡಿಪಡಿಸಬಾರದು ಎಲ್ಲರೂ ಒಟ್ಟಾಗಿ ಬನ್ನಿ ಜತೆಯಲ್ಲಿ ಕರೆದೊಯ್ದರು. ಈ ವೇಳೆ ಗ್ರಾಮದ ಹಿರಿಯ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನರಸಿಂಹಯ್ಯ ಹಾಗೂ ಇತರ ಮುಖಂಡರು, ದೇವಾಲಯದ ಪ್ರವೇಶದ್ವಾರದಲ್ಲಿ ನಿಂತುಕೊಂಡು, ” ನಾವು ಎಂದಿಗೂ ಅಡ್ಡಿಪಡಿಸಿಲ್ಲ ಒಳಗಡೆ ಬನಿ ಎಂದುʼʼ ಆಹ್ವಾನಿಸಿದ್ದು ವಿಶೇಷವಾಗಿತ್ತು.
ದಲಿತರ ದೇವಾಲಯ ಪ್ರವೇಶ ಮುಗಿದ ಬಳಿಕ ಮಾತನಾಡಿದ ತಹಶೀಲ್ದಾರ್, ಕೂಡಲೇ ಈ ದೇವಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಎಂದು ಬೋರ್ಡ್ ಹಾಕಿಸಬೇಕು ಎಂದು ತಾಕೀತು ಮಾಡಿದರು. ಜತೆಗೆ, ಗ್ರಾಮದಲ್ಲಿ ಸಾರ್ವಜನಿಕ ನೀರಿನ ಕೊಳಾಯಿ ಬಳಿ ಕೂಡ ಯಾವುದೇ ಭೇದಭಾವ ಮಾಡಬಾರದು, ಈ ರೀತಿ ಕಂಡು ಬಂದರೆ ವಾಟರ್ ಮ್ಯಾನ್ ಕೂಡಲೇ ಪಂಚಾಯತಿ ಪಿಡಿಓಗೆ ತಿಳಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸೂಚಿಸಿದರು.
“ಗ್ರಾಮಸ್ಥರು ಕೂಡ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕು. ಪರಸ್ಪರ ಸೌಹಾರ್ಧಯುತವಾಗಿ ಬದುಕಬೇಕು. ಯಾವುದೇ ವಿವಾದಗಳಿಗೆ ಅವಕಾಶ ಮಾಡಿಕೊಡಬಾರದು. ಸಂವಿಧಾನದ ಆಶಯಗಳಾದ ಸಮಾನತೆ, ಭ್ರಾತೃತ್ವ,ಜಾತ್ಯಾತೀತತೆ ಮೌಲ್ಯಗಳಿಗೆ ಗೌರವ ನೀಡಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ತಹಶೀಲ್ದಾರ್ ಅವರು, ” ಅಸ್ಪ್ರಶ್ಯತೆ ಆಚರಣೆ ಆರೋಪಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರ ಜತೆ ಸಭೆ ನಡೆಸಿ ದಲಿತರಿಗೆ ದೇವಾಲಯ ಪವೇಶ ಕಲ್ಪಿಸಲಾಗಿದೆ. ಇನ್ನು ಮುಂದೆ ಯಾವುದೇ ರೀತಿಯ ಜಾತಿಭೇಧ ಮಾಡಬಾರದು ಎಂದು ಸೂಚನೆ ನೀಡಿದ್ದು ಇದನ್ನು ಮೀರಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಗ್ರಾಮದ ಹಿರಿಯ, ಜಿಲ್ಲಾಪಂಚಾಯತ್ ಮಾಜಿ ಸದಸ್ಯ ನರಸಿಂಹಯ್ಯ ಮಾತನಾಡಿ, ನಮ್ಮ ಗ್ರಾಮದಲ್ಲಿ ಅತ್ಯಂತ ಸೌಹಾರ್ಧಯುತವಾಗಿ ಜನರು ಜೀವನ ನಡೆಸುತ್ತಿದ್ದಾರೆ. ಎಂದೂ ಜಾತಿಗಳ ನಡುವೆ ವೈಷಮ್ಯ ಬಂದಿರಲಿಲ್ಲ. ಆದರೆ, ಗ್ರಾಮಪಂಚಾಯತ್ ಮಾಜಿ ಸದಸ್ಯ ಸೇರಿದಂತೆ ಕೆಲವರ ವೈಯಕ್ತಿಕ ಪ್ರತಿಷ್ಠೆ, ವೈಷಮ್ಯದಿಂದ ಇಂತಹದ್ದೊಂದು ವಿವಾದ ಸೃಷ್ಟಿಯಾಗಿದ್ದು ದುರದೃಷ್ಟಕರ ಸಂಗತಿಯಾಗಿದೆ.ದೇವಾಲಯ ಪ್ರವೇಶ ಕೇಳಿದರೂ ಮುಕ್ತವಾಗಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು.
ಕುರುವಿಗೆರೆ ಗ್ರಾಮದಲ್ಲಿ ಅಸ್ಪ್ರಶ್ಯತೆ ಆಚರಿಸಲಾಗುತ್ತಿದೆ. ದೇವಾಲಯಕ್ಕೆ ದಲಿತರ ಪ್ರವೇಶ ನೀಡುತ್ತಿಲ್ಲ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಗ್ರಾಮಪಂಚಾಯತ್ ಮಾಜಿ ಸದಸ್ಯ ಮುನಿರಾಜು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಇಂದು ತಹಶೀಲ್ದಾರ್ ಶಿವರಾಜು, ಉಪತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆರೋಪ ಕುರಿತಂತೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						