ದೊಡ್ಡಬಳ್ಳಾಪುರ: ಪಲ್ಸರ್ ಬೈಕ್ ಬಳಸಿ ನಗರ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ನಡೆಸಿದ್ದ ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಲ್ಸರ್ ದ್ವಿಚಕ್ರ ವಾಹನದಲ್ಲಿ ಮಾ.23ರಂದು ನಗರದ ಕೆಂಪೇಗೌಡನಗರದಲ್ಲಿ ಸಂಜೆ ವೇಳೆ ಮನೆಯ ಮುಂದೆ ನಿಂತಿದ್ದ ಮಹಿಳೆಯೋರ್ವರ ಮಾಂಗಲ್ಯ ಸರದ ಸುಲಿಗೆ ಹಾಗೂ ಮೇ.29ರಂದು ಖಾಸ್ ಬಾಗ್ ರೈಲ್ವೆ ಬ್ರಿಡ್ಜ್ ಬಳಿ ನಿಂತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಸುಲಿಗೆ ಮಡಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ಡಿವೈಎಸ್ಪಿ ಟಿ.ರಂಗಪ್ಪ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಲಾಗಿದ್ದು, ಭುವನೇಶ್ವರಿ ನಗರದ ನವೀನ್.ಪಿ (28ವರ್ಷ), ಜಾಲಪ್ಪ ಕಾಲೇಜು ರಸ್ತೆಯ ಪುನೀತ್ ಕುಮಾರ್.ಎಸ್ (23ವರ್ಷ) ಇವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದೊಡ್ಡಬಳ್ಳಾಪುರ ನಗರದಲ್ಲಿ ಎರಡು, ಗ್ರಾಮಾಂತರ ಠಾಣೆ, ವಿಶ್ವನಾಥಪುರ ಠಾಣೆ ಹಾಗೂ ಚಿಕ್ಕಬಳ್ಳಾಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಪಲ್ಸರ್ ದ್ವಿಚಕ್ರ ವಾಹನ ಬಳಸಿಕೊಂಡು ತಲಾ ಒಂದು ಚಿನ್ನದ ಮಾಂಗಲ್ಯ ಸರ ಸುಲಿಗೆ ಮಾಡಿರುವುದು ತಿಳಿದುಬಂದಿದೆ.
ಬಂಧಿತರಿಂದ ಸುಮಾರು 5 ಲಕ್ಷ ಮೌಲ್ಯದ 5 ಚಿನ್ನದ ಸರ, ಒಂದು ಲಕ್ಷ ಮೌಲ್ಯದ ಪಲ್ಸರ್ ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರನ್ನು ಐಜಿಪಿ ಚಂದ್ರಶೇಖರ್, ಎಸ್ಪಿ ಡಾ.ವಂಶೀಕೃಷ್ಣ, ಎಎಸ್ಪಿ ಲಕ್ಷ್ಮೀಗಣೇಶ್ ಪ್ರಶಂಸೆ ಸಲ್ಲಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..
 
				 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						