ದೊಡ್ಡಬಳ್ಳಾಪುರ: ಭ್ರಷ್ಟರೇ ಪವಿತ್ರವಾದ ರಾಜಕಾರಣ ಬಿಟ್ಟು ತೊಲಗಿ ಅಭಿಯಾನ ಆ.8 ರಂದು ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದಿಂದ ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಬ್ರೀಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಮಡಿದ ಹುತಾತ್ಮರ ಸ್ಮಾರಕಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಹಿರಿಯ ಸಾಮೀಜ ಹೋರಾಟಗಾರ ಎಸ್.ಆರ್.ಹಿರೇಮಠ್, ಲೇಖಕ ನಾಗಭೂಷಣ್ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲೂ ನಡೆಯುವ ಅಭಿಯಾನದ ಸಭೆಗಳ ಸಮಾರೋಪ ಸಮಾರಂಭ ಸೆಪ್ಟಂಬರ್ 8 ರಂದು ತುಮಕೂರಿನಲ್ಲಿ ನಡೆಯಲಿದೆ. ಸೆಪ್ಟಂಬರ್ 6 ರಂದು ದೊಡ್ಡಬಳ್ಳಾಪುರದಲ್ಲಿ ಲಂಚ ಮುಕ್ತ ಅಭಿಯಾನದ ಸಭೆ ನಡೆಯಲಿದೆ ಎಂದರು.
ಕಂದಾಯ ಇಲಾಖೆಯಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ. ರಾಜಕೀಯ ಶುದ್ಧೀಕರಣ ನಡೆದರೆ ಮಾತ್ರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸಾಧ್ಯ.ಹೀಗಾಗಿ ಸ್ವಚ್ಛ,ಪ್ರಾಮಾಣಿಕ,ಜನಪರ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಶ್ರಮಿಸಲಿದೆ.
ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಅಡ್ಡಗಳಾಗಿ ಮಾರ್ಪಟ್ಟಿವೆ. ರಾಜಕಾರಣಿಗಳ, ಬಲಾಢ್ಯರ ಪರವಾಗಿ ಪೊಲೀಸ್ ಠಾಣೆಗಳು ಕೆಲಸ ಮಾಡುತ್ತಿವೆ. ಹಳ್ಳಿಗಳಲ್ಲಿ ಮದ್ಯ ಮಾರಾಟದಿಂದಲೇ ಜನತೆ ಕುಡಿತದ ಚಟಕ್ಕೆ ಬಿದ್ದಿದ್ದಾರೆ. ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ರಾಜಕಾರಣಿಗಳಿಂದ ಸಾಧ್ಯ. ಆದರೆ ಯೋಗ್ಯ ರಾಜಕಾರಣಿಗಳು ಇಂದು ರಾಜಕೀಯದಲ್ಲಿ ಕಾಣುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಿಗೆ ಪರ್ಯಾಯವಾಗಿ ಕೆಆರ್ಎಸ್ ಪ್ರಾದೇಶಿಕ ಪಕ್ಷವಾಗಿ ಉದಯವಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ನಗರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						