ಬೆಂ.ಗ್ರಾ.ಜಿಲ್ಲೆ: ಗೋಮಾಳವನ್ನು ಜಮೀನು ಮಾಡಿಕೊಳ್ಳುವ ಮೂಲಕ ಜಾನುವಾರುಗಳಿಗೆ ಮೇವು ಮೇಯಿಸಲು ಜಾಗ ಇಲ್ಲದಂತೆ ಮಾಡುತ್ತಿದ್ದಾರೆ ಎಂಬ ಯುವಕನೋರ್ವನ ಜನಪರ ಕಾಳಜಿಯುಳ್ಳ ಪೊಸ್ಟ್ಗೆ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸ್ಪಂದಿಸಿದ್ದು ಗೋಮಾಳ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿರುವ ಅಪರೂಪದ ಘಟನೆ ನಡೆದಿದೆ.
ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದ ಸರ್ವೆ ನಂ.27 ರಲ್ಲಿನ ಗೋಮಾಳ ಜಾಗವನ್ನು ಜಾನುವಾರುಗಳ ಮೇವಿಗಾಗಿ ಸರ್ಕಾರ ಮೀಸಲಿಟ್ಟಿದೆ. ಆದರೆ, ಈ ಗೋಮಾಳವನ್ನು ಉಜ್ಜನಿ ಗ್ರಾಮದ ಕೆಲವರು ಒತ್ತುವರಿ ಮಾಡಿ ಜಮೀನಾಗಿ ಪರಿವರ್ತಿಸುವ ಮೂಲಕ, ಜಾನುವಾರುಗಳಿಗೆ ಮೇವಿಗೆ ಸ್ಥಳದ ಕೊರತೆ ಉಂಟು ಮಾಡುತ್ತಿದ್ದಾರೆ ಎಂದು ನವೀನ್ ಯಾದವ್ ಎನ್ನುವವರು ಜುಲೈ.22 ರಂದು ಫೇಸ್ಬುಕ್ ಖಾತೆಯಲ್ಲಿ ನೋವಿನಿಂದ ಬರೆದುಕೊಂಡಿದ್ದಾರೆ.
ಈ ಪೊಸ್ಟ್ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ಗಮನಕ್ಕೆ ಬಂದಿದ್ದು, ಕೂಡಲೆ ಸ್ಥಳಕ್ಕೆ ತೆರಳಿ ಗೋಮಾಳ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ಸ್ಥಳಕ್ಕೆ ತೆರಳಿದ ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಹಾಗೂ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಜಾನುವಾರುಗಳಿಗೆಂದು ಮೀಸಲಿಟ್ಟಿರುವ ಗೋಮಾಳ ಒತ್ತುವರಿಯನ್ನು ಕೂಡಲೆ ತೆರವು ಮಾಡುವಂತೆ ಒತ್ತುವರಿದಾರರಿಗೆ ಸೂಚಿಸಿದರು. ಅಲ್ಲದೆ ಸೂಚನೆ ಉಲ್ಲಂಘಿಸಿ ಗೋಮಾಳ ಒತ್ತುವರಿ ಮಾಡಿದಲ್ಲಿ ಕ್ರಿಮಿನಲ್ ಮೊಕದ್ದಮೆ ಹೋಡುವುದಾಗಿ ಎಚ್ಚರಿಕೆ ನೀಡಿದರು.
ಒಟ್ಟಾರೆ ಗೋಮಾಳ ರಕ್ಷಣೆ ಸಾಮಾಜಿಕ ಜಾಲತಾಣದಲ್ಲಿ ಯುವಕನ ಅಳಲಿಗೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರು ಸ್ಪಂದಿಸಿರುವ ರೀತಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..