ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲಿಕುಂಟೆ ಬಳಿ ಹೈಟೆಕ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆಗೆ ಭೂ ಸ್ವಾಧೀನ ಕೈಬಿಡುವಂತೆ ಕೆಐಡಿಬಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಎನ್.ಶಿವಶಂಕರ್ ಅವರಿಗೆ ಹುಲಿಕುಂಟೆ ಗ್ರಾಮದ ರೈತರು ಸೋಮವಾರ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಕೃಷಿ ಭೂ ರಕ್ಷಣಾ ಹೋರಾಟ ಸಮಿತಿಯ ಮುಖಂಡರು, ಹುಲಿಕುಂಟೆ, ಗ್ವಾರಟಘಟ್ಟ ಸೇರಿದಂತೆ ಈ ಭಾಗದಲ್ಲಿನ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನದಿಂದ ಕೈಬಿಡಬೇಕು, ಹೈಟೆಕ್ ಲಾಜಿಸ್ಟಿಕ್ ಪಾರ್ಕ್‌ಗೆ ಹೋಗುವ ಬೃಹತ್ ಲಾರಿಗಳು ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ಹುಲಿಕುಂಟೆ ಗ್ರಾಮದ ಮೂಲಕ ನಿರ್ಮಿಸುವ ರಸ್ತೆ ಕಾಮಗಾರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಮನವಿ ಸಲ್ಲಿಸಿದ್ದೇವೆ. ಕೆಐಡಿಬಿ ಅಧಿಕಾರಿಗಳು ಹುಲಿಕುಂಟೆ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಸಹ ರೈತರ ಪರವಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಭೂ ಸ್ವಾಧೀನ ಕೈಬಿಡುವಂತೆ ತಿಳಿಸಿದ್ದಾರೆ ಎಂದರು.
ರೈತರ ನಿಯೋಗದಲ್ಲಿ ಕೃಷಿ ಭೂ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ದೇವರಾಜ್, ಗ್ರಾಪಂ ಸದಸ್ಯೆ ಸವಿತಾ, ಸ್ಥಳೀಯ ಮುಖಂಡರಾದ ವಿಶ್ವನಾಥ್, ಗೋಪಿನಾಥ್, ವಿವೇಕ್, ಕೀರ್ತಿ ಸೇರಿದಂತೆ ಭೂಮಿ ಕಳೆದುಕೊಳ್ಳುವ ರೈತರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						