ದೊಡ್ಡಬಳ್ಳಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಜನೆಯಂತೆ ಮಳೆ ನೀರನ್ನ ಭೂಮಿಯಲ್ಲಿ ಇಂಗಿಸುವ ಮೂಲಕ ಅಂತರ್ಜಲ ಮರುಪೂರಣ ಎಂಬ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಕೆರೆಕಟ್ಟೆಗಳು, ಕಲ್ಯಾಣಿಗಳನ್ನು ನರೇಗಾದ ಅಡಿಯಲ್ಲಿ ಅಂತರ್ಜಲ ಮರುಪೂರಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದರು.
ತಾಲ್ಲೂಕಿನ ಎಸ್.ಎಸ್.ಘಾಟಿಯಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯ ಮಾಧವ ಸೃಷ್ಠಿಗೆ ಇಂದು ಭೇಟಿ ನೀಡಿದ ಅವರು, ಗೋ ಮಾತೆಗೆ ಪೂಜೆ ಸಲ್ಲಿಸಿ, ಗಿಡ ನೆಟ್ಟು ನೀರುಣಿಸಿ, ಮಾತನಾಡಿದರು.
ರಾಜ್ಯದ ಎಲ್ಲಾ ಕೆರೆಕಟ್ಟೆಗಳು, ಕಲ್ಯಾಣಿಗಳನ್ನು ನರೇಗಾದ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಇಡೀ ದೇಶದಲ್ಲಿ ನರೇಗಾ ಕಾಮಗಾರಿಗಳ ಮುಖಾಂತರ ಕರ್ನಾಟಕ ದೇಶದಲ್ಲಿಯೇ ಮೊದಲನೆ ಸ್ಥಾನದಲ್ಲಿದೆ ಎಂದು ತಿಳಿಸಿದರು.
ನರೇಗಾದಡಿಯಲ್ಲಿ ದುಡಿಯುವುದಕ್ಕೆ ಕೂಲಿ ಎಂದು ಹೇಳುವುದಕ್ಕೆ ಇಷ್ಟ ಪಡುವುದಿಲ್ಲ ಎಂದರಲ್ಲದೆ, ಯುದ್ದ ಭೂಮಿಯಲ್ಲಿ ಸೈನಿಕರು ಕರ್ತವ್ಯ ನಿರ್ವಹಿಸುವ ರೀತಿಯಲ್ಲಿಯೇ, ಸಮಾಜದಲ್ಲಿ ಬಡವರು ಕೂಡ ಸೈನಿಕರ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.
ನಾವೆಲ್ಲರೂ ಪರಿಸರ ಬೆಳೆಸಲು, ಕೆರೆ ಅಭಿವೃದ್ಧಿ ಮಾಡಲು, ಕಲ್ಯಾಣಿಗಳು ಅಭಿವೃದ್ಧಿ ಮಾಡಲು ಈ ಸ್ಥಳ ಸ್ಫೂರ್ತಿ ನೀಡುತ್ತದೆ ಎಂದರಲ್ಲದೆ, ಇಲ್ಲಿ ತರಬೇತಿ ಕೇಂದ್ರ ತೆರೆಯಬೇಕೆಂಬ ಎಂಬ ತೀರ್ಮಾನವನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಇಲ್ಲಿನ ಪರಿಸರವನ್ನು ನೋಡಿದರೆ, ಪರಿಸರವನ್ನು ಹಾಳು ಮಾಡಬೇಕೆಂಬ ಭಾವನೆ ಯಾರಿಗೂ ಬರುವುದಿಲ್ಲ ಎಂದರಲ್ಲದೆ, ಪ್ರಚಾರಕರ ಜೈದೇವ್ ಅವರು ತಮ್ಮ ಕನಸಿನಂತೆ ಒಂದು ಪರಿಸರ ವ್ಯವಸ್ಥೆ ಮಾಡುವ ಪ್ರಯತ್ನವನ್ನು ನಡೆಸಿದ್ದು, ಆ ಕನಸನ್ನು ನನಸು ಮಾಡುವ ಅವಕಾಶ ನಮಗೆಲ್ಲ ದೊರೆತಿದೆ ಎಂದು ತಿಳಿಸಿದರು.ಗೋಮಾತೆಗೆ ಯಾವಾಗ ಪೂರ್ಣ ಮಹತ್ವ ಸಿಗುತ್ತದೆಯೋ ಅಂದು ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕ ಎಂದರಲ್ಲದೆ, ಗೋ ಮಾಂಸಕ್ಕಾಗಿ ಗೋವು ಹಾಗೂ ಅವುಗಳ ಕರುಗಳ ಹತ್ಯೆಯಾಗುತ್ತಿರುವುದು ವಿಷಾದನೀಯ ಎಂದರು ಹಾಗೂ ಗೋ ಮಾತೆಗೆ ಪೂರ್ಣ ಮಾತೆ ಸ್ಥಾನ ಸಿಗುತ್ತದೆಯೋ ಅಲ್ಲಿಯ ತನಕ ಸ್ವಾತಂತ್ರ್ಯ ಸಿಕ್ಕಿದಂತಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹೇಳಿದ್ದಾರೆ ಎಂದರು.
ಕಾಡು ಕಳ್ಳತನದಂತಹ ವ್ಯವಸ್ಥೆಯಿರುವ ಈ ಸಮಾಜದಲ್ಲಿ ನಾವಿಂದು ಗಿಡ ನೆಟ್ಟಿರುವುದು, ಗಿಡ ಬೆಳೆಸಬೇಕೆಂಬುವುದರ ಅರ್ಥ ಎಂದರಲ್ಲದೆ, ಹೀಗೆ ಸಮಾಜದಲ್ಲಿ ಯಾವ ಕಾರ್ಯವಾಗಬೇಕು ಎಂಬುದನ್ನು ಮಾತಲ್ಲಿ ಹೇಳದೆಯೇ ವಿರೇಶ್ ಹೆಗ್ಗಡೆಯವರು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಆಕಾಶದಿಂದ ಬಂದ ಮಳೆ ನೀರು ಸಮುದ್ರಕ್ಕೆ ಹೋಗದಂತೆ ತಡೆದು, ಭೂಮಿಯಲ್ಲಿ ಇಂಗುವಂತೆ ಕ್ರಮವಹಿಸಬೇಕು ಹಾಗೂ ದೇವಸ್ಥಾನಗಳ ಕಲ್ಯಾಣಿಗಳಲ್ಲಿ, ಕೆರೆಗಳಲ್ಲಿನ ಹೂಳು ತೆಗೆದಯುವ ಮೂಲಕ ಅವುಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಹೊಂಡದಲ್ಲಿ ನೀರು ತುಂಬಿದರೆ, ತಮ್ಮ ಜಮೀನಿನಲ್ಲಿ ಅಂತರ್ಜಲದ ಮಟ್ಟವೂ ಹೆಚ್ಚಾಗುತ್ತದೆ ಎಂದರಲ್ಲದೆ, ಸಮಾಜದಲ್ಲಿ ಯಾರು ನಿರುದ್ಯೋಗ ಸಮಸ್ಯೆ ಎದುರಿಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ನರೇಗಾ ಯೋಜನೆ ಮುಖಾಂತರ ಕೆಲಸ ಒದಗಿಸುತ್ತಿದ್ದು, ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ಈ ಯೋಜನೆಯ ಮೂಲಕ ಹೆಚ್ಚು ಹೆಚ್ಚು ಮಾಡಬೇಕು ಎಂದು ಸಲಹೆ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……