ದೊಡ್ಡಬಳ್ಳಾಪುರ: ತಾಲ್ಲೂಕಿನ ನ್ಯಾಯಾಲಯ ವ್ಯಾಪ್ತಿಯಲ್ಲಿ 2,612 ವಿವಿಧ ರೀತಿಯ ಪಾಲು ವಿಭಾಗ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳು ಮಾತುಕತೆಯ ಮೂಲಕ ಲೋಕ್ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಲು ಅವಕಾಶಗಳಿವೆ. ವಕೀಲರು ಹಾಗೂ ಕಕ್ಷಿದಾರರು ಅದಾಲತ್ ನಲ್ಲಿ ಮುಕ್ತಮನಸ್ಸಿನಿಂದ ಮುಂದೆ ಬರಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಕೆ.ಆರ್.ದೀಪ ಹೇಳಿದರು.
ಅವರು ನಗರದಲ್ಲಿ ಸೆ.30 ರಂದು ನಡೆಯಲಿರುವ ಲೋಕ್ ಅದಾಲತ್ ಅಂಗವಾಗಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು
412 ಕ್ರಮಿನಲ್ ಪ್ರಕರಣಗಳು,1618 ಚಕ್ಬೌನ್ಸ್, ರಾಜಿಗೆ ಅರ್ಹವಾಗಿರುವ 221 ಕ್ರಮಿನಲ್ ಪ್ರಕರಗಳು ಇವೆ. ಇವುಗಳನ್ನು ಆದಲಾತ್ನಲ್ಲಿ ಪರಿಹರಿಸಿಕೊಂಡರೆ ಎರಡೂ ಕಡೆಯ ಕಕ್ಷಿದಾರರಿಗು ತ್ವರಿತವಾಗಿ ನ್ಯಾಯ ದೊರೆಯಲು ಅನುಕೂಲವಾಗಲಿದೆ. 2008 ರಿಂದಲು ಇತ್ಯಾರ್ಥವಾಗದೆ ಇರುವ ಪಾಲು ವಿಭಾಗದ ಪ್ರಕರಗಳು ಸಹ ಇವೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ನ್ಯಾಯಾಲಯದಲ್ಲಿ ಇತ್ಯಾರ್ಥವಾಗಿರುವ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳ ತೀರ್ಪುಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ವಿನಾಕರಣ ವಿಳಂಬ ದೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಕಕ್ಷಿದಾರರು ತಾಲ್ಲೂಕು ಕಚೇರಿಗೆ ಅಲೆದಾಡುವಂತಹ ಸ್ಥಿ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅರವಿಂದ ಸಾಯಿಬಣ್ಣ ಹಾಗರಗಿ, ನ್ಯಾಯಾಲಯದಲ್ಲಿ ಯಾವುದೇ ರೀತಿಯಿಂದ ಇತ್ಯಾರ್ಥವಾಗುವ ಪ್ರಕರಣ ಸೇರಿದಂತೆ ನ್ಯಾಯಾಲಯದ ಎಲ್ಲಾ ಆದೇಶಗಳನ್ನು ಪಾಲಿಸುವುದು ಕಂದಾಯ, ಸರ್ವೇ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಕರ್ತವ್ಯವಾಗಿದೆ. ಈ ಬಗ್ಗೆ ಸದ್ಯದಲ್ಲೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ಇಲಾಖೆಗಳ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗುವುದು. ನ್ಯಾಯಾಲಯದ ಆದೇಶಗಳನ್ನು ಕಾಲಮಿತಿಯ ಒಳಗೆ ಪಾಲಿಸದೇ ಇದ್ದರೆ ಕ್ರಮಕೈಗೊಳ್ಳಲು ಅವಕಾಶವಿದೆ. ಆಗಸ್ಟ್ ತಿಂಗಳಲ್ಲಿ ನಡೆದ ಲೋಕ್ ಅದಲಾತ್ನಲ್ಲಿ 2,890 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿದ್ದವು ಎಂದರು.
ಪೂರ್ವಭಾವಿ ಸಭೆಯಲ್ಲಿ ಹೆಚ್ಚುವರಿ ಹಿರಿಯ ನ್ಯಾಯಾಧೀಶರಾದ ಜ್ಯೋತಿ ಎಸ್.ಕಾಳೆ, ಹೆಚ್ಚುವರಿ ನ್ಯಾಯಾಧೀಶರಾದ ಮಮತಾ ಶಿವಪೂಜೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಬೈರೇಗೌಡ, ಖಜಾಂಚಿ ಎ.ವಿ.ಮುರುಳಿ, ಉಪಾಧ್ಯಕ್ಷ ಎಚ್.ಎಂ.ಮಂಜುನಾಥ್, ನಿರ್ದೇಶಕರಾದ ಹರೀಶ್, ಶ್ರೀನಿವಾಸ್, ನರಸಿಂಹಮೂರ್ತಿ, ವಕೀಲರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..