ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳ ಹೆಚ್ಚುವರಿ ಬಸ್ ಬೇಡಿಕೆಗೆ ನಗರದ ಸಾರಿಗೆ ಡಿಪೋ ಅಧಿಕಾರಿಗಳು ಸ್ಪಂದಿಸಿದ್ದು, ಹೊಸಹಳ್ಳಿ ವ್ಯಾಪ್ತಿಗೆ ಶನಿವಾರದಿಂದ ಹೆಚ್ಚುವರಿ ಬಸ್ ನೀಡಲು ಭರವಸೆ ನೀಡಿದ್ದಾರೆ.
ಈ ಕುರಿತಂತೆ ಡಿಪೋ ವ್ಯವಸ್ಥಾಪಕ ಆನಂದ್ ಹರಿತಲೇಖನಿಯೊಂದಿಗೆ ಮಾತನಾಡಿ, ತಾಲೂಕಿನ ಕೊಟ್ಟಿಗೆಮಂಚೇನಹಳ್ಳಿಯಿಂದ ಹೊಸಹಳ್ಳಿ, ಗುಂಡಮಗೆರೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತಿರುವ ಕುರಿತು ಮಾಹಿತಿ ದೊರೆತಿದ್ದು, ಶನಿವಾರದಿಂದ ಹೆಚ್ಚುವರಿ ಬಸ್ ಸಂಚರಿಸಲು ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹೊಸಹಳ್ಳಿ ವ್ಯಾಪ್ತಿಯಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ಸಾರಿಗೆ ಬಸ್ಸಿನಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಗಬೇಕಾದ ಅನಿವಾರ್ಯತೆ ಎದುರಾಗಿದ್ದು, ಪ್ರತಿನಿತ್ಯ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಇದೇ ಚಿಂತೆಯಾಗಿ ಪರಿಣಮಿಸಿತ್ತು.
ಲಾಕ್ ಡೌನ್ ತೆರವಿನ ನಂತರ ಗ್ರಾಮೀಣ ಪ್ರದೇಶದ ಬಸ್ ಸಂಚಾರದಲ್ಲಿ ಏರುಪೇರಾಗಿದೆ. ಸಮಯಕ್ಕೆ ಬರುತ್ತಿದ್ದ ಬಸ್ಸುಗಳು ಲಾಕ್ ಡೌನ್ ತೆರವಿನ ನಂತರ ಬರುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು. ಅಲ್ಲದೆ ಬಸ್ ನಲ್ಲಿ ಜನದಟ್ಟಣೆಯಿಂದ ತರಗತಿಗಳಿಗೆ ವಿಳಂಬವಾಗುತ್ತಿದೆ ಎಂಬ ವಿದ್ಯಾರ್ಥಿಗಳ ಆರೋಪದ ಕುರಿತು ಹರಿತಲೇಖನಿ ವರದಿ ಮಾಡಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..