ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಸೆಪ್ಟೆಂಬರ್ 17ರಂದು ಕೋವಿಡ್-19 ವಿಶೇಷ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 8,33,641 ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದ್ದು, ಈವರೆಗೂ 5,73,089 ಜನರಿಗೆ ಲಸಿಕೆಯನ್ನು ನೀಡಲಾಗಿದ್ದು, ಉಳಿದ 2,58,040 ಜನರಿಗೆ ಲಸಿಕೆಯನ್ನು ನೀಡಬೇಕಾಗಿರುವುದರಿಂದ ಈ ವಿಶೇಷ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ದೊಡ್ಡಬಳ್ಳಾಪುರ ತಾಲ್ಲೂಕಿಗೆ 30,000, ನೆಲಮಂಗಲ ತಾಲ್ಲೂಕಿಗೆ 22,000, ದೇವನಹಳ್ಳಿ ತಾಲ್ಲೂಕಿಗೆ 10,000 ಹಾಗೂ ಹೊಸಕೋಟೆ ತಾಲ್ಲೂಕಿಗೆ 10,000 ರಂತೆ ಜಿಲ್ಲೆಗೆ ಒಟ್ಟು 72 ಸಾವಿರಗಳ ಗುರಿಯನ್ನು ನೀಡಲಾಗಿದೆ.
ನಾಗರೀಕರು ಲಸಿಕೆಯನ್ನು ಪಡೆಯಲು ಸಹಕಾರಿಯಾಗುವಂತೆ ಅವರ ಗ್ರಾಮ ಮಟ್ಟಗಳಲ್ಲಿ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿಯೇ ಲಸಿಕಾಕರಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆದ್ಯತೆಯುಳ್ಳ ಗುಂಪುಗಳಾದ ಕೈಗಾರಿಕಾ ವಸಾಹತು, ಕೊಳಗೇರಿ ಪ್ರದೇಶಗಳು, ಆಪಾರ್ಟ್ಮೆಂಟ್ಸ್ ಗಳು, ಕಟ್ಟಡ ಕಾಮಗಾರಿ ಸ್ಥಳಗಳು, ಅಲೆಮಾರಿ ಗುಂಪುಗಳು, 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಕ್ಯಾಬ್ ಡ್ರೈವರ್ ಗಳು, ಹೋಟಲ್ ಸಿಬ್ಬಂದಿಗಳು, ಗಾರ್ಮೆಂಟ್ಸ್ ನೌಕರರು ಹಾಗೂ ಇತರೆ ಎಲ್ಲಾ ಅರ್ಹ ನಾಗರೀಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಹಳ್ಳಿಗಳಲ್ಲಿ ಲಸಿಕಾಕರಣವನ್ನು ನಡೆಸಲಾಗುವುದು.
ಲಸಿಕೆ ಪಡೆಯದೆ ಇರುವ ಸಾರ್ವಜನಿಕರು ಲಸಿಕೆ ಪಡೆಯುವ ಮೂಲಕ ಈ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..