ಬೆಂಗಳೂರು: ಹುಬ್ಬಳ್ಳಿ ನಾಗಶೆಟ್ಟಿಕೊಪ್ಪದ ನಿವಾಸಿ ಅರ್ಚನಾ ಮಲ್ಲಿಕಾರ್ಜುನ ಮಳಗಿ ಎಂಬುವವರಿಗೆ ಅವರ ತಂದೆ ದಿ.ಮಲ್ಲಿಕಾರ್ಜುನ ಮಳಗಿ ಅವರು ಗದಗ ಜಿಲ್ಲೆ ರೋಣ ತಾಲೂಕಿನ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕನಲ್ಲಿ ವಿವಿಧ ದಿನಾಂಕಗಳಂದು ಇರಿಸಿದ್ದ 11 ಲಕ್ಷ 55 ಸಾವಿರ ರೂ. ಠೇವಣಿ ಹಣವನ್ನು ಬಡ್ಡಿ ಸಹಿತವಾಗಿ ಹಾಗೂ 5 ಸಾವಿರ ರೂ. ದೈಹಿಕ ಪರಿಹಾರ, 2 ಸಾವಿರ ರೂ. ಫಿರ್ಯಾಧಿ ವೆಚ್ಚದೊಂದಿಗೆ ಪಾವತಿಸಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಫಿರ್ಯಾದಿದಾರರಾದ ಅರ್ಚನಾ ಅವರ ತಂದೆ ಮಲ್ಲಿಕಾರ್ಜುನ ಮಳಗಿ ಅವರು ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ 2019ರ ಮೇ.23 ರಂದು ನಿಧನ ಹೊಂದಿದ್ದರು. ಇದಕ್ಕೂ ಮುನ್ನ ಅವರ ತಾಯಿ ಶಶಿಕಲಾ ಮಲ್ಲಿಕಾರ್ಜುನ ಮಳಗಿ 2004ರ ಜನೆವರಿ 23 ರಂದು ಹುಬ್ಬಳ್ಳಿಯಲ್ಲಿ ನಿಧನ ಹೊಂದಿದ್ದರು.
ಮಲ್ಲಿಕಾರ್ಜುನ ಮಳಗಿ ಅವರು ಗದಗ ಜಿಲ್ಲೆ ರೋಣ ತಾಲೂಕಿನ ಪ್ರೈಮರಿ ಟೀಚರ್ಸ್ ಕೋ- ಆಪರೇಟಿವ್ ಬ್ಯಾಂಕನಲ್ಲಿ ವಿವಿಧ ದಿನಾಂಕಗಳಂದು 11 ಲಕ್ಷ 55 ಸಾವಿರ ರೂ. ಠೇವಣಿ ಹಣವನ್ನು ಇರಿಸಿದ್ದರು. ಶಾಂತವ್ವ ಸುರೇಶ ಅಂಗಡಿ ಎಂಬ ಮಹಿಳೆಯ ಹೆಸರಿಗೆ ಠೇವಣಿಯನ್ನು ನಾಮನಿರ್ದೇಶನ ಮಾಡಿದ್ದರು. ಮಲ್ಲಿಕಾರ್ಜುನ ಮಳಗಿ ಅವರ ನಿಧನದ ನಂತರ ಮಗಳಾದ ಅರ್ಚನಾ ಅವರು ವಾರಸುದಾರರ ಪ್ರಮಾಣ ಪತ್ರದೊಂದಿಗೆ ಬ್ಯಾಂಕಿಗೆ ಅರ್ಜಿ ಸಲ್ಲಿಸಿ ತಮ್ಮ ತಂದೆಯ ಠೇವಣಿ ಹಣ ಪಾವತಿಸಲು ಕೋರಿದ್ದರು. ಬ್ಯಾಂಕಿನವರು ನಾಮನಿರ್ದೇಶನ ಹೊಂದಿದ ವ್ಯಕ್ತಿಯ ಒಪ್ಪಿಗೆ ಪತ್ರ ತರಲು ಸೂಚಿಸಿದ್ದರು.
ಅರ್ಚನಾ ತೆಗೆದುಕೊಂಡು ಬಂದ ಒಪ್ಪಿಗೆ ಪತ್ರದಲ್ಲಿನ ಸಹಿಗೂ ಬ್ಯಾಂಕಿನ ನಾಮನಿರ್ದೇಶನದಲ್ಲಿನ ಸಹಿಗೂ ವ್ಯತ್ಯಾಸ ಇತ್ತು. ಬ್ಯಾಂಕು ಒಪ್ಪಿಗೆ ಪತ್ರ ಸ್ವೀಕರಿಸಲಿಲ್ಲ. ನಂತರ ಅರ್ಚನಾ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು. ಅರ್ಜಿದಾರರು ಹಾಗೂ ಎದುರುದಾರರ ವಾದಗಳನ್ನು ಆಲಿಸಿದ ಆಯೋಗವು ಬ್ಯಾಂಕು ಠೇವಣಿ ಮರುಪಾವತಿಸುವಲ್ಲಿ ಸಮಂಜಸ ಮತ್ತು ಕಾನೂನು ರೀತ್ಯ ವ್ಯವಹರಿಸಿ ಕ್ರಮಕೈಗೊಳ್ಳಲು ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಅರ್ಜಿದಾರರಾದ ಅರ್ಚನಾ ಮಳಗಿ ಅವರಿಗೆ ಠೇವಣಿ ಹಣ, ಬಡ್ಡಿ ಹಾಗೂ ಪರಿಹಾರ ಒದಗಿಸಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಎಂ.ಕುಂಬಾರ, ಸದಸ್ಯರಾದ ಶ್ರೀಮತಿ ವಿ.ಎ.ಬೋಳಶೆಟ್ಟಿ ಹಾಗೂ ಪಿ.ಸಿ. ಹಿರೇಮಠ ಅವರು ಸಹಿ ಮಾಡಿ ಸೆ. 17 ರಂದು ಆದೇಶ ಹೊರಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..