ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯದಲ್ಲಿ ಮದುವೆ ಆರತಕ್ಷತೆ ಮುಗಿಸಿ, ತೊಂಡೆಬಾವಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ, ಓರ್ವ ಸಾವನಪ್ಪಿ ಹಲವರು ಗಾಯಗೊಂಡಿರುವ ಘಟನೆ ಘಾಟಿ ತಿರುವಿನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಮೃತನನ್ನು ತೊಂಡೆಬಾವಿ ರೈಲ್ವೆ ಸ್ಟೇಷನ್ ನಿವಾಸಿ ಶಿವಕುಮಾರ್ (55 ವರ್ಷ) ಎಂದು ಗುರುತಿಸಲಾಗಿದೆ.
ಘಾಟಿ ಸುಬ್ರಹ್ಮಣ್ಯ ದೇವಾಲಯ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ಆಯೋಜಿಸಲಾಗಿತ್ತು. ಈ ಮದುವೆಯ ಆರತಕ್ಷತೆ ಶನಿವಾರ ಸಂಜೆ ನಡೆದಿದ್ದು, ಇದಕ್ಕೆ ಗೌರಿಬಿದನೂರು ತಾಲೂಕಿನ ತೊಂಡೆಭಾವಿ ಹೋಬಳಿಯ ಬೆಳಚಿಕ್ಕನಹಳ್ಳಿ ಗ್ರಾಮದಿಂದ ಖಾಸಗಿ ಬಸ್ಸಿನಲ್ಲಿ ಜನರು ಬಂದಿದ್ದರು. ಆರತಕ್ಷತೆ ಮುಗಿಸಿಕೊಂಡು ಹಿಂತಿರುಗಿ ತೆರಳುವ ವೇಳೆ ಘಾಟಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ಉರುಳಿಬಿದ್ದಿದೆ.
ಘಟನೆಯಲ್ಲಿ 15ಕ್ಕು ಹೆಚ್ಚು ಜನರಿಗೆ ಗಾಯಗಳಾಗಿದ್ದು, ನಾಲ್ವರಿಗೆ ತೀವ್ರ ಪೆಟ್ಟಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಷಯ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಾತ್ರಿ 12ರ ವರೆಗೂ ಕಾರ್ಯಾಚರಣೆ ನಡೆಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….