ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಸಮೀಪದ ವಿಶ್ವೇಶ್ವರಯ್ಯ ಪಿಕ್ ಡ್ಯಾಂನಲ್ಲಿ ನೀರು ಸಂಗ್ರಹವಾಗಲು ಅಡ್ಡಲಾಗಿ ನಿರ್ಮಿಸಲಾಗಿದ್ದ ಮಣ್ಣಿನ ದಿಬ್ಬವನ್ನು ಜೆಸಿಬಿ ಮೂಲಕ ಕಾಲುವೆ ತೋಡಿ ಡ್ಯಾಮ್ ನಲ್ಲಿ ಸಂಗ್ರಹವಾಗಿದ್ದ ಭಾರಿ ಪ್ರಮಾಣದ ನೀರನ್ನು ಹರಿಬಿಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಶಾಸಕರಾದ ಟಿ.ವೆಂಕಟರಮಣಯ್ಯ, ನಿಸರ್ಗ ನಾರಾಯಣಸ್ವಾಮಿ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ.
ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಕರೆ ಮಾಡಿದ ಶಾಸಕ ಟಿ.ವೆಂಕಟರಮಣಯ್ಯ, ಅಂತರ್ಜಲಕ್ಕೆ ಅನುಕೂಲವಾಗುವಂತೆ ವಿಶ್ವೇಶ್ವರಯ್ಯ ಪಿಕ್ ಡ್ಯಾಂ ದುರಸ್ತಿ ಮಾಡಲಾಗಿತ್ತು. ಈ ಡ್ಯಾಂ ನೀರಿನಿಂದ ಘಾಟಿ ಗ್ರಾಮಪಂಚಾಯಿತಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಸಬಹುದಿತ್ತು. ಆದರೆ ಸೇತುವೆ ನಿರ್ಮಾಣದ ಹೆಸರಲ್ಲಿ ಮಣ್ಣಿನ ದಿಬ್ಬವನ್ನು ಜೆಸಿಬಿ ಮೂಲಕ ಒಡೆದು ಹಾಕಿದ್ದಾರೆ.
ನೀರಿನಲ್ಲಿಯೇ ದೊಡ್ಡ ದೊಡ್ಡ ಸೇತುವೆ ನಿರ್ಮಿಸುತ್ತಾರೆ. ಆದರೆ ಚಿಕ್ಕ ಸೇತುವೆ ನಿರ್ಮಾಣಕ್ಕೆ ಅಪಾರ ನೀರು ಸಂಗ್ರಹವಾಗುತ್ತಿದ್ದ ಡ್ಯಾಂ ದಿಬ್ಬವನ್ನು ಒಡೆದಿದ್ದಾರೆ. ಈ ಕೂಡಲೇ ಸಂಬಂಧ ಪಟ್ಟವರ ಕುರಿತು ಕ್ರಮಕೈಗೊಳ್ಳಬೇಕಿದೆ.
ನೆಲ, ಜಲ ಉಳಿಸುವುದು ಎಲ್ಲರ ಹೊಣೆಗಾರಿಕೆ ಈ ನಿಟ್ಟಿನಲ್ಲಿ ಸದನದಲ್ಲಿ ಪ್ರಶ್ನಿಸಲಾಗುವುದು, ಅದಕ್ಕು ಮುನ್ನ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ. ಅಲ್ಲದೆ ಮಣ್ಣಿನ ದಿಬ್ಬ ಕುಸಿಯದಂತೆ ಕಾಮಗಾರಿ ನಡೆಸಲು ಸೂಚನೆ ನೀಡುವಂತೆ ಶಾಸಕ ಟಿ.ವೆಂಕಟರಮಣಯ್ಯ ಒತ್ತಾಯಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
 
				 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						