ಬೆಂ.ಗ್ರಾ.ಜಿಲ್ಲೆ: ಜ.26ರಂದು ದೇವನಹಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ದೇವನಹಳ್ಳಿ ಜಿಲ್ಲೆ ಎಂದು ಹೆಸರು ಘೋಷಣೆ ಮಾಡಿ ಹಾಗೂ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ನೀಡಿ ಎಂದು ಒತ್ತಾಯಿಸಿದ್ದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ. ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದಂತೆ ಇಂದು ಯೂಟರ್ನ್ ಹೊಡೆದಿದ್ದು, ಗಣರಾಜ್ಯೋತ್ಸವದಂದು ದೇವನಹಳ್ಳಿ ಜಿಲ್ಲೆಯೆಂದು ಘೋಷಿಸಿ, ಹೆಸರು ಬದಲಾವಣೆ ಮಾಡಿ ಎಂದು ಒತ್ತಾಯ ಮಾಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತೂಬಗೆರೆ ಹೋಬಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯ ವೇಳೆ ಭೇಟಿಯಾದ ಕನ್ನಡ ಪರ ಸಂಘಟನೆಗಳ ಮುಖಂಡರಿಗೆ ಈ ಕುರಿತು ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದರು, ಜಿಲ್ಲಾ ಕೇಂದ್ರ ಘೋಷಣೆಯಾಗದೆ ಸರ್ಕಾರ ಅನುದಾನ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರವೆಂದು ಘೋಷಿಸಿ ಎಂಬುದೇ ನನ್ನ ಒತ್ತಾಯವಾಗಿದೆಯೇ ಹೊರತು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲವೆಂದು ಹೆಸರು ಬದಲಿಸಲು ಕೇಳುತ್ತಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರ ಯಾವುದು ಎಂಬುದು ಪ್ರಶ್ನೆಯಾಗಿದೆ. ರಾಮನಗರ ಜಿಲ್ಲೆ ರಾಮನಗರ ಜಿಲ್ಲಾ ಕೇಂದ್ರ, ಮಂಡ್ಯ ಜಿಲ್ಲೆ ಮಂಡ್ಯ ಜಿಲ್ಲಾ ಕೇಂದ್ರ, ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಎಂದಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವೆಂದು ಘೋಷಿಸಿ ಜಿಲ್ಲೆಯ ಅಭಿವೃದ್ಧಿಗೆ ಅನುದನ ನೀಡಬೇಕೆಂಬುದು ನನ್ನ ಒತ್ತಾಯವಾಗಿದೆ. ಅದರೆ ನನ್ನ ಹೇಳಿಕೆಯನ್ನು ತಿರುಚಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕು ಮುನ್ನ ಮಾತನಾಡಿದ ಕನ್ನಡಪರ ಸಂಘಟನೆಗಳ ಮುಖಂಡರಾದ ಕನ್ನಡ ಪಕ್ಷದ ಸಂಜೀವ್ ನಾಯಕ್, ಕರವೇ ಪ್ರವೀಣ್ ಶೆಟ್ಟಿ ಬಣದ ಹಮಾಮ್ ವೆಂಕಟೇಶ್, ಹಿರಿಯ ಹೋರಾಟಗಾರಾರದ ಸತ್ಯನಾರಾಯಣ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಘೋಷಣೆಗೆ ಎಲ್ಲಾ ರೀತಿಯಲ್ಲಿ ದೊಡ್ಡಬಳ್ಳಾಪುರ ಸೂಕ್ತವಾಗಿದ್ದರು, ರಾಜಕೀಯ ಲಾಭಕ್ಕೆ ದೇವನಹಳ್ಳಿಯನ್ನು ಜಿಲ್ಲೆ ಎಂದು ಘೋಷಿಸಿ ಎಂದು ಒತ್ತಾಯಿಸುತ್ತಿರುವುದು ನಿಮಗೆ ಶೋಭೆಯಲ್ಲ. ಚುನಾವಣೆ ಸಮೀಪ ಬರುತ್ತಿದ್ದಂತೆ ಈ ರೀತಿ ಹೇಳಿಕೆ ನೀಡಿ ಎರಡು ತಾಲೂಕು ಜನರ ನೆಮ್ಮದಿ ಕೆಡಿಸುವುದು ಸರಿಯಲ್ಲ. ಶಾಸಕರು ಈ ಧೋರಣೆ ಬದಲಿಸಿಕೊಳ್ಳಬೇಕು, ಜಿಲ್ಲೆಯ ಒಂದೇ ತಾಲೂಕನ್ನೆ ದೃಷ್ಟಿಯಾಗಿಸಿಕೊಂಡು ಜಿಲ್ಲೆ ಎಂದು ಘೋಷಣೆ ಮಾಡುವಂತೆ ಒತ್ತಾಯಿಸುವುದು ಸರಿಯಲ್ಲ. ನಿಮ್ಮ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಆಕ್ಷೇಪಿಸಿದರು.
ವಿಡಿಯೋ ಮಾಡದಂತೆ ಸೂಚನೆ: ಸಭೆಯ ವೇಳೆ ಕನ್ನಡ ಪರ ಸಂಘಟನೆಗಳು ಏಕಾಏಕಿ ಭೇಟಿಗೆ ವಿಚಲಿತರಾದ ನಿಸರ್ಗ ನಾರಾಯಣಸ್ವಾಮಿ, ದೇವನಹಳ್ಳಿ ಜಿಲ್ಲೆ ಎಂದು ಘೋಷಿಸಿ ಎಂದು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ, ಜಿಲ್ಲಾ ಕೇಂದ್ರ ಘೋಷಣೆ ಮಾಡಿ ಎಂಬುದಷ್ಟೆ ನನ್ನ ಹೇಳಿಕೆಯಾಗಿದೆ ಎಂದರು. ಈ ಸಂದರ್ಭದಲ್ಲಿ ವರದಿಗೆ ವಿಡಿಯೋ ಸೆರೆಹಿಡಿಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಇದು ಆಫ್ದ ರೆಕಾರ್ಡ್ ಎಂದು ವಿಡಿಯೋ ಚಿತ್ರೀಕರಣ ಮಾಡದಂತೆ ಸೂಚಿಸಿದರು.
ಈ ವೇಳೆ ತಹಶೀಲ್ದಾರ್ ಮೋಹನಕುಮಾರಿ, ಇಒ ಶ್ರೀನಾಥ್ ಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಹೋರಾಟಗಾರರಾದ ಜೋಗಹಳ್ಳಿ ಅಮ್ಮು, ಸೂರಿ, ವೆಂಕಟೇಶ್, ಎಂ.ಸತೀಶ್, ಕೆ.ಪಿ.ಜಗನ್ನಾಥ್, ಮಾಹಿತಿ ಹಕ್ಕು, ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಡಿ.ಉಪ್ಪಾರ್, ದೊಡ್ಡತುಮಕೂರು ಆನಂದ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….