ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಕಲ್ಲುಕೋಟೆ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು, ಗ್ರಾಮಸ್ಥರು ಆತಂಕದಿಂದ ಜೀವನ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮಸ್ಥರು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತೂಬಗೆರೆ ಹೋಬಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯ ವೇಳೆ ಮಾತನಾಡಿದ ಗ್ರಾಮಸ್ಥರು, ಕಲ್ಲುಕೋಟೆ ಸುತ್ತಮುತ್ತಲಿನ ಗ್ರಾಮಗಳಿಗೆ ಚಿರತೆ ದಾಳಿಯಿಟ್ಟು ಜಾನುವಾರುಗಳನ್ನು ಬಲಿ ಪಡೆಯುತ್ತಿದೆ, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಬೇಕೆಂದರು.
ಈ ಕುರಿತು ತ್ವರಿತ ಕ್ರಮಕ್ಕೆ ಸೂಚಿಸಿದ ಶಾಸಕ ನಿಸರ್ಗ ಸ್ವಾಮಿ ಅವರಿಗೆ ಉತ್ತರಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಈಗಾಗಲೇ ಚಿರತೆ ಸೆರೆ ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದು, ಬೋನ್ ಅಳವಡಿಸಲಾಗಿದೆ ಎಂದರು.
ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಆದರೆ ಪರಿಶಿಷ್ಟ ಜಾತಿಯವರಿಗೆ ಸಮುದಾಯ ಭವನ ನಿರ್ಮಿಸಿಕೊಡಬೇಕೆಂಬ ಕೂಗು ಬಹು ವರ್ಷಗಳಿಂದ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಮುಖಂಡರು ಬೇಡಿಕೆ ಇಟ್ಟರು.
ಈ ಕುರಿತು ಘಾಟಿ ಕ್ಷೇತ್ರದಲ್ಲಿ ನಿವೇಶನವನ್ನು ಆಯ್ಕೆ ಮಾಡುವಂತೆ ತಹಶೀಲ್ದಾರ್ ಮೋಹನಕುಮಾರಿ ಅವರಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೂಚಿಸಿದರು.
ಉಳಿದಂತೆ ಬಗರ್ ಹುಕ್ಕುಂ ಉಳುಮೆ ಚೀಟಿ ನೀಡುವುದು, ಉಳಿಮೆ ಚೀಟಿ ನೀಡಿದವರಿಗೆ ಖಾತೆ ಮಾಡಿಕೊಡುವುದು, ಫಾರಂ ನಂ53ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಉಳಿಮೆ ಚೀಟಿ, ಸ್ಮಶಾನಗಳ ಒತ್ತುವರಿ ತೆರವು ಮತ್ತಿತರ ಅಹವಾಲುಗಳು ಸಭೆಯಲ್ಲಿ ಕೇಳಿಬಂತು.
ತಹಶೀಲ್ದಾರ್ ಮೋಹನಕುಮಾರಿ, ಇಒ ಶ್ರೀನಾಥ್ ಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….