ಲೋನೊವಾಲ, (ಜುಲೈ.01): ರಜೆಯ ಮೋಜು ಕಳೆಯಲು ಪ್ರವಾಸಿ ತಾಣದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿ ಜಲಪಾತದಲ್ಲಿ ಕೊಚ್ಚಿ ಹೋದ ಘಟನೆ ಮುಂಬೈ ಸಮೀಪದ ಪ್ರವಾಸಿ ತಾಣವಾದ ಲೋನೊವಾಲದಲ್ಲಿ ಸಂಭವಿಸಿದ್ದು, ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನಿಂದ 80 ಕಿ.ಮೀ. ದೂರದ ಲೋನೊವಾಲದ ಬುಶಿ ಜಲಾಶಯದ ಹಿನ್ನೀರಿನ ಬಳಿಯ ಕಿರು ಜಲಪಾತದಲ್ಲಿ ಮೋಜಿಗಾಗಿ ಇಳಿದಿದ್ದ ಒಂದೇ ಕುಟುಂಬದ 5 ಮಂದಿ ಒಟ್ಟಿಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮತ್ತಿಬ್ಬರನ್ನು ರಕ್ಷಿಸಲಾಗಿದೆ.
36 ವರ್ಷದ ತಾಯಿ ಸಹಿಸ್ತಾ ಲಿಯಾಖತ್ ಅನ್ಸಾರಿ ಹಾಗೂ ಅಮಿನಾ ಸಲ್ಮಾನ್ (13 ವರ್ಷ), ಉಮೇರಾ ಸಲ್ಮಾನ್ (8 ವರ್ಷ), ಅಡ್ನಾನ್ ಅನ್ಸಾರಿ (4 ವರ್ಷ) ಮತ್ತು ಮರಿಯಾ ಅನ್ಸಾರಿ (9 ವರ್ಷ) ಮೃತಪಟ್ಟ ದುರ್ದೈವಿಗಳು.
ಭಾನುವಾರ ರಜೆ ಕಳೆಯಲು ಜಲಪಾತದ ಬಳಿ ತೆರಳಿದ್ದರು. ಸಾಧಾರಣವಾಗಿದ್ದ ನೀರಿನ ಬಳಿ ಸ್ನಾನ ಮಾಡುತ್ತಿದ್ದಾಗ ಮಧ್ಯಾಹ್ನ 1.30ರ ಸುಮಾರಿಗೆ ದಿಢೀರನೆ ನದಿಯ ನೀರಿನಲ್ಲಿ ಭಾರೀ ಏರಿಕೆಯಾಗಿದ್ದರಿಂದ ಕೊಚ್ಚಿ ಹೋಗಿದ್ದಾರೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಮುಂಬೈನಿಂದ 80 ಕಿ.ಮೀ. ದೂರದ ಪ್ರವಾಸಿ ತಾಣದಲ್ಲಿ ಕುಟುಂಬದವರು ರಜೆ ಕಳೆಯಲು ಬಂದಿದ್ದರು. ಒಂದೇ ಕುಟುಂಬದ 5 ಮಂದಿ ಹಾಗೂ ಮತ್ತಿಬ್ಬರು ಪ್ರವಾಸಿಗರು ನೀರಿನ ಮಧ್ಯದ ಬಂಡೆಗಳ ಮೇಲೆ ಕುಳಿತು ಎಂಜಾಯ್ ಮಾಡುತ್ತಿದ್ದಾಗ ದಿಢೀರನೆ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದ ಎದ್ದು ರಕ್ಷಣೆ ಪಡೆಯುವಷ್ಟರಲ್ಲಿ ದಡದ ಮೇಲಿದ್ದ ಪ್ರವಾಸಿಗರು ನೋಡು ನೋಡುತ್ತಿದ್ದಂತೆ ಅವರು ಕೊಚ್ಚಿ ಹೋಗಿದ್ದಾರೆ. ಇಬ್ಬರನ್ನು ರಕ್ಷಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.
ಪ್ರಸ್ತುತ ವರದಿಗಳ ಪ್ರಕಾರ ಅಡ್ನಾನ್ ಅನ್ಸಾರಿ ಮತ್ತು ಮರಿಯಾ ಅವರ ಮೃತದೇಹಗಳಿಗೆ ಶೋಧ ಕಾರ್ಯ ಮುಂದುವರಿದಿದ್ದು, ಉಳಿದ 3 ಮಂದಿಯ ಶವ ಜಲಪಾತದ ಹಿನ್ನೀರಿನಲ್ಲಿ ಪತ್ತೆಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….