ದೊಡ್ಡಬಳ್ಳಾಪುರ, (ಆಗಸ್ಟ್.16); ಪ್ರತಿಯೊಬ್ಬ ಮನುಷ್ಯನೂ ಯಾರಿಗೂ ತಲೆ ಬಾಗದೆ ತಲೆ ಎತ್ತಿ ನಿಲ್ಲುವುದು ನಿಜವಾದ ಸ್ವಾತಂತ್ರ್ಯ ಎಂದು ಸಮಾಜ ವಿಜ್ಞಾನಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಜಿ.ಎನ್.ನಾಗರಾಜ್ ಅವರು ಹೇಳಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಇತರೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ 78 ನೇ ಸ್ವಾತಂತ್ರ್ಯೋತ್ಸವ ಆಹೋರಾತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಎಲ್ಲ ಜನರಿಗೆ ಊಟ, ಬಟ್ಟೆ, ವಸತಿ ಆರೋಗ್ಯ ಮತ್ತು ಉದ್ಯೋಗ ಸಿಕ್ಕಾಗ ನಿಜವಾದ ಸ್ವಾತಂತ್ರ್ಯ ಎಂದರು. ಆ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯೇ.? ಎಂಬ ಬಗ್ಗೆ ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಎಲ್ಲರಿಗೂ ಪುಷ್ಠಿಕರವಾದ ಆಹಾರ ಸಿಗಬೇಕು, ಹಾಲು ಮೊಟ್ಟೆ, ಮಾಂಸ, ಬೇಳೆಕಾಳು, ತುಪ್ಪ, ತರಕಾರಿ ಮುಂತಾದ ಅಗತ್ಯ ಪೌಷ್ಟಿಕಾಹಾರ ಸಿಕ್ಕರೆ ಅದು ನಿಜವಾದ ಊಟವಾಗಿದೆ ಎಂದರು.
40% ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ, 58% ಮಕ್ಕಳು ಬಳಲುತ್ತಿದ್ದಾರೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಮತ್ತು ತೂಕ ಇಲ್ಲ. ಗರ್ಭಿಣಿ ಸ್ತ್ರೀಯರಿಗೆ ಅಗತ್ಯ ಪೌಷ್ಟಿಕಾಂಶ ಸಿಗುತ್ತಿಲ್ಲ. ಹತ್ತು ವರ್ಷದವರೆಗೆ ಮಕ್ಕಳ ಮೆದುಳು ಬೆಳವಣಿಗೆ ಆಗುತ್ತದೆ, ಈ ವೇಳೆ ಅವರಿಗೆ ಪೌಷ್ಟಿಕಾಂಶ ಉಳ್ಳ ಆಹಾರ ಸಿಗಬೇಕು ಸಮರ್ಪಕವಾದ ಊಟ ಸಿಗದ ಕಾರಣ ಅವರ ಮೆದುಳಿನ ಬೆಳವಣಿಗೆ ಕುಂಟಿತವಾಗುತ್ತಿದೆ ಎಂದರು.
ದೇಶದ 10% ಜನರ ಬಳಿ 67% ಆಸ್ತಿ ಇದೆ. ದೇಶಕ್ಕೆ ಅವರು 3% ತೆರಿಗೆ ಕೊಡ್ತಾರೆ. ಆದರೆ 90% ಜನರಾದ ನಾವು 97% ತೆರಗೆಯನ್ನ ಕಟ್ಟುತ್ತಿದ್ದೇವೆ. ನಾವು ಕಟ್ಟುವ ತೆರಿಗೆ ನಮಗೆ ವಾಪಸ್ ಬರುವ ಬದಲು ಅದು ಅಂಬಾನಿ ಆದಾನಿಯಂತಹ ಬಂಡವಾಳಶಾಹಿಗಳ ತಿಜೋರಿ ಸೇರುತ್ತಿದೆ ಎಂದು ಆರೋಪಿಸಿದರು.
ರೈತರು ಎಪಿಎಂಸಿ ಕಾಯ್ದೆಯ ಬಗ್ಗೆ ಕಾರ್ಮಿಕರು ಕಾರ್ಮಿಕ ಕಾಯ್ದೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಯಾಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ವಿಶಾಲವಾದ ಮನೋಭಾವ, ಅದಕ್ಕೆ ಬೇಕಾದ ಅರಿವಿನ ಬಗ್ಗೆ ನಮಗೆ ಕುತೂಹಲವಿರಬೇಕು.
ನಮಗೆ ರಾಜಕೀಯ ಬೇಡ ಎಂಬ ಮನಸ್ಥಿತಿ ಇದ್ದರೆ ಯಾವ ಹೋರಾಟಗಳ ಬಗ್ಗೆಯೂ ಯಾವುದೇ ಮಾಹಿತಿ ತಿಳಿಯಲು ಸಾಧ್ಯವಿಲ್ಲ. ಜೊತೆಗೆ ಈ ವ್ಯವಸ್ಥೆಯೂ ಬದಲಾಗುವುದಿಲ್ಲ ಎಂದರು.
ಅಣ್ಣ-ತಮ್ಮಂದಿರ ನಡುವೆ ಅಡಿಜಾಗಕ್ಕಾಗಿ ಗುದ್ದಾಟ ನಡೆಸುವ ನೀವು, ನಿಮ್ಮ ಬೆವರಿನ ಪಾಲನ್ನು ಪ್ರತಿದಿನ ಸುಲಿಗೆ ಮಾಡಲಾಗುತ್ತಿದೆ. ಅದರ ಬಗ್ಗೆ ಚಕಾರವೆತ್ತದೆ ಕುಳಿತರೆ ಮುಂದಿನ ನಮ್ಮ ಬದುಕುಗಳು ಅದೇ ಗುಲಾಮಗಿರಿಯಲ್ಲಿ ಇರುತ್ತವೆ ಎಂಬುದನ್ನು ನೆನಪಿಡಬೇಕು ಎಂದರು.
ಬಜೆಟ್ ಮಂಡಿಸುವಾಗಲೇ ಶೇರು ಮಾರುಕಟ್ಟೆ ಬಿದ್ದುಹೋಗುತ್ತದೆ, ಆಳುವ ಸರ್ಕಾರ ತಕ್ಷಣ ಅವರಿಗೆ ಸ್ಫಂದಿಸಿ ಅವರ ಪರವಾದ ಕಾನೂನುಗಳನ್ನು ರೂಪಿಸಲು ಮುಂದಾಗುತ್ತವೆ.
ಬಜೆಟ್ ಮಂಡಿಸುವಾಗ ಬೆಲೆ ಇಳಿಸಿದ್ರಾ..? ಬಡವರ ತೆರಿಗೆ ಕಡಿಮೆ ಮಾಡುವ ಬಗ್ಗೆ ಎಷ್ಟು ಮಾತನಾಡಿದಿರಿ..? ಬಜೆಟ್ಟಿನ 150 ಲಕ್ಷ ಕೋಟಿಯಲ್ಲಿ 120 ಲಕ್ಷಕೋಟಿ ಬಡವರಿಗೆ ಮಧ್ಯಮ ವರ್ಗಗಳಿಗೆ ಸಿಗಬೇಕು ಎಂಬ ಕಾನೂನು ಏಕೆ ಮಾಡಲಿಲ್ಲ ಎಂದು ಜನ ಬೀದಿಗೆ ಬಂದು ಪ್ರಶ್ನೆ ಮಾಡಿದರೆ ಆಗ ಬಡವರ ಪರವಾದ ಬಜೆಟ್ ಬರುತ್ತದೆ.
ಪ್ರಶ್ನೆ ಮಾಡುವ ತಿಳುವಳಿಕೆ ಪಡೆಯಲು ರೈತ, ಕಾರ್ಮಿಕ, ಕೂಲಿಕಾರರ, ವಿದ್ಯಾರ್ಥಿ ಯುವಜನ ಮತ್ತು ಮಹಿಳಾ ಸಂಘನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಸಂಜೆ ಆರು ಗಂಟೆಗೆ ಆರಂಭವಾದ ಕಾರ್ಯಕ್ರಮ ರಾತ್ರಿ ಹನ್ನೆರಡು ಗಂಟೆಗೆ ದ್ವಜಾರೋಹಣದ ಮೂಲಕ ಮುಕ್ತಾಯವಾಯಿತು.
ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿಎ ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರಾದ ಪಿ.ಗೋವಿಂದರಾಜು, ಕೆ ಪಿ ಆರ್ ಎಸ್ ಮುಖಂಡರಾದ ಆರ್ ಚಂದ್ರ ತೇಜಸ್ವಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ಲಲಿತಾ ನಾಟ್ಯ ಕಲಾ ಸಂಘದ ತಂಡದಿಂದ ಭರತನಾಟ್ಯ, ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ತಂಡದ ಮಕ್ಕಳಿಂದ ಯೋಗ ಪ್ರದರ್ಶನ ನಡೆಯಿತು. ಕವಿ ಗೋಷ್ಠಿ ನಡೆಸಲಾಯಿತು. ದೊಡ್ಡಬಳ್ಳಾಪುರದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ದೊಡ್ಡಬಳ್ಳಾಪುರದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಂಗಗೀತೆಗಳು, ಜಾನಪದ ಗೀತೆಗಳು, ದೇಶ ಭಕ್ತಿ ಗೀತೆಗಳು, ಗೀತ ಗಾಯನ, ನವೀನ್ ಕುಮಾರ್ ಅವರಿಂದ ಗದಾಯುದ್ಧ ಏಕಪಾತ್ರ ಅಭಿನಯ, ಲವಕುಮಾರ್ ಅವರಿಂದ ಕಿರು ನಾಟಕ ಪ್ರದರ್ಶನ, ಮಿಮಿಕ್ರಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಎಚ್ ಎನ್ ಮೋಹನ್ ಬಾಬು, ಜಿಲ್ಲಾ ಮುಖಂಡರಾದ ಅಂಜುಮ್ ಖಾನ್, ಆನಂದ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….