ಬೆಂಗಳೂರು, (ಸೆ.17): ಒಕ್ಕಲಿಗ ಸಮುದಾಯದ ಮಹಿಳೆಯರ ಕುರಿತು ಬಿಜೆಪಿ ಶಾಸಕ ಮುನಿರತ್ನ ನೀಡಿರವ ಹೇಳಿಕೆ ಬಗ್ಗೆ ಸಮುದಾಯದ ಮುಖ್ಯಸ್ಥರು, ಸ್ವಾಮೀಜಿಗಳು, ಹಿರಿಯರು, ನಾಗರೀಕರು ಮಾತನಾಡಬೇಕು. ಅದರ ಬಗ್ಗೆ ಅಶೋಕ್ ಹಾಗೂ ಬಿಜೆಪಿ ನಾಯಕರು ಮಾತನಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು.
ಅಮೇರಿಕ ಪ್ರವಾಸದಿಂದ ಮರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ದೊಡ್ಡ ನಾಯಕರಿದ್ದಾರೆ, ಅವರು ಮಾತಾಡಬೇಕು. ಇಂತಹ ವಿಚಾರದಲ್ಲಿ ಬಿಜೆಪಿಯವರೇ ಪ್ರತಿಕ್ರಿಯೆ ನೀಡಬೇಕು. ಮುನಿರತ್ನ ಮಾತನಾಡಿರುವುದು ಸರಿಯೋ ತಪ್ಪೋ? ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ತಿಳಿಸಬೇಕು. ಸರಿಯಿದ್ದರೆ ಸರಿ, ತಪ್ಪಿದ್ದರೆ ತಪ್ಪು ಎಂದು ಹೇಳಬೇಕು ಎಂದು ತಿಳಿಸಿದರು.
ಪೊಲೀಸರ ಬಂಧನಕ್ಕೆ ಮುಂಚಿತವಾಗಿ ನನ್ನ ವಿಚಾರದಲ್ಲಿ ಅಣ್ಣ- ತಮ್ಮಂದಿರ ಆಟ ಶುರುವಾಗಿದೆ ಎನ್ನುವ ಮುನಿರತ್ನ ಹೇಳಿಕೆಗೆ ಉತ್ತರಿಸಿದ ಅವರು, ನನಗೆ ಈ ವಿಚಾರ ಗೊತ್ತೇ ಇಲ್ಲ, ತಿಳಿದು ಮಾತಾಡ್ತೀನಿ. ನನಗೆ ಇನ್ನು ಸರಿಯಾಗಿ ಮಾಹಿತಿ ಗೊತ್ತಿಲ್ಲ. ಸಾಂವಿಧಾನಿಕ ಹುದ್ದೆ ಹೊಂದಿರುವ ಆರ್ ಅಶೋಕ್, ವಿಜಯೇಂದ್ರ, ಮತ್ತು ಕೇಂದ್ರ ಸಚಿವರು ಇದ್ದಾರೆ. ಅವರುಗಳು ದೊಡ್ಡ ನಾಯಕರು ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದರು.
ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ಭೇಟಿ ಹಾಗೂ ಚರ್ಚೆಯ ವಿಚಾರದ ಬಗ್ಗೆ ಕೇಳಿದಾಗ, ನಮ್ಮ ಪಕ್ಷದ ನಾಯಕರನ್ನು ಭೇಟಿಯಾಗಲು ಯಾರ ಅನುಮತಿ ಕೇಳಬೇಕು? ರಾಹುಲ್ ಗಾಂಧಿ ಅವರ ಬಳಿ ಏನು ಮಾತನಾಡಿದೆ ಎಂದು ಮಾಧ್ಯಮದವರಿಗೆ ಹೇಳಲಾಗುತ್ತದೆಯೇ? ನನ್ನ ತಮ್ಮ, ಹೆಂಡತಿ ಮತ್ತು ಸ್ವಾಮೀಜಿಯವರ ಬಳಿ ಏನು ಮಾತನಾಡುತ್ತೇನೆ ಎಂಬುದನ್ನು ನಿಮ್ಮ ಬಳಿ ಹೇಳಲು ಆಗುತ್ತದೆಯೇ? ಎಂದರು.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ಸರ್ಕಾರ, ಪೊಲೀಸ್ ಇಲಾಖೆಯು ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ಮಾಡುತ್ತದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….