
ಹರಿದ್ವಾರ, (ಸೆ.21); ಉತ್ತರ ಭಾರತದ ಸುಪ್ರಸಿದ್ದ ಹಾಗೂ ಧಾರ್ಮಿಕ ಸ್ಥಳ ಹರಿದ್ವಾರದಲ್ಲಿಂದು ಗಂಗಾರತಿಯ ದೈವಿಕ ಕ್ಷಣಕ್ಕೆ ಕರ್ನಾಟಕದ ಕಾಂಗ್ರೆಸ್ ನಿಯೋಗ ಸಾಕ್ಷಿಯಾಗಿದೆ.
ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಹರಿದ್ವಾರ ಮತ್ತು ವಾರಾಣಾಸಿಗೆ ತೆರಳಿ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿದೆ.
ಉತ್ತರ ಭಾರತದಲ್ಲಿ ನಡೆಯುವ ಗಂಗಾರತಿಯಂತೇ ರಾಜ್ಯದಲ್ಲಿ ಕಾವೇರಿ ಆರತಿ ನಡೆಸಲು ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಅಧ್ಯಯನ ನಡೆಸಲು ಹರಿದ್ವಾರಕ್ಕೆ ಪ್ರವಾಸ ನಿಯೋಜಿಸಿದ್ದು ಶುಕ್ರವಾರ 11 ಅಧಿಕಾರಿಗಳನ್ನು ಒಳಗೊಂಡ ತಂಡ ಹರಿದ್ವಾರಕ್ಕೆ ಭೇಟಿ ನೀಡಿತು.
ನಿಯೋಗ ಹರಿದ್ವಾರ ಹಾಗೂ ವಾರಣಾಸಿಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಿದ್ದು ಮೊದಲು ಹರಿದ್ವಾರಕ್ಕೆ ಭೇಟಿ ನೀಡಿ ಇಂದು ವಾರಣಾಸಿಗೆ ತೆರಳಲಿದೆ. ಹರಿದ್ವಾರದ ಹರ್ ಕೀ ಪೌಡಿ ಘಾಟ್‌ನಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ನಿಯೋಗ ಭಾಗಿಯಾಯಿತು.
ಸಚಿವ ಚಲುವರಾಯಸ್ವಾಮಿ ಹಾಗೂ ಎಲ್ಲ ಸದಸ್ಯರು ವಿಶೇಷ ಆರತಿ ಮಾಡಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಬಳಿಕ ಆರತಿ ನಡೆಯುವ ರೀತಿ ರಿವಾಜುಗಳನ್ನು ಪರಿಶೀಲಿಸಿದರು.
ಈ ವೇಳೆ ಹಿಂದೂ ಸಭಾ ಆಡಳಿತ ಸಮಿತಿ ಜೊತೆಗೆ ಮಾತುಕತೆ ನಡೆಸಿದ ನಿಯೋಗ ರಾಜ್ಯ ಸರ್ಕಾರದ ಪ್ರಸ್ತಾವನೆ ಬಗ್ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ. ಆಡಳಿತ ಸಮಿತಿ ಕಾರ್ಯದರ್ಶಿ ತನ್ಮಯ ವಶಿಷ್ಟ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವುದು ಖುಷಿಯ ಸಂಗತಿಯಾಗಿದೆ ಎಂದು ಹೇಳಿದರು.
ಗಂಗಾನದಿಯಂತೆ ಕಾವೇರಿ ನದಿ ಕೂಡಾ ಜೀವ ನದಿಯಾಗಿದೆ. ಅದಕ್ಕಾಗಿ ಇಲ್ಲಿಯೂ ಆರತಿ ಮಾಡಲು ನಿರ್ಧರಿಸಿದ್ದು, ಡಿಸಿಎಂ ಡಿಕೆ ಶಿವಕುಮಾರ್ ನಿರ್ದೇಶನದ ಮೇರೆಗೆ ಈ ಬಗ್ಗೆ ನಮ್ಮ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಅಧ್ಯಯನಕ್ಕೆ ಬಂದಿದ್ದೇವೆ ದಸರಾದೊಳಗೆ ಕಾವೇರಿ ಆರತಿ ಶುರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						