ಗೋಕಾಕ್: ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ತೀವ್ರ ಸದ್ದು ಮಾಡುತ್ತಿದ್ದು, ಗೃಹಲಕ್ಷ್ಮಿ ಹಣ ಕೂಡಿಟ್ಟ ಮನೆ ಯಜಮಾನಿಯರು ಟಿವಿ, ಫ್ರಿಡ್ಜ್ ಖರೀದಿಸಿದ್ದರು. ಅತ್ತೆ ಸೊಸೆಗೆ ಫ್ಯಾನ್ಸಿ ಸ್ಟೋರ್ ಮಾಡಿಕೊಟ್ಟಿದ್ದರು. ಮತ್ತೊಬ್ಬರು ಊರಿನವರಿಗೆಲ್ಲಾ ಹೋಳಿಗೆ ಊಟ ಹಾಕಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದೀಗ ನವರಾತ್ರಿ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣ ಕೂಡಿಟ್ಟ ತಾಯಿ ಮಗನಿಗೆ ಹೊಸ ಬೈಕ್ ಕೊಡಿಸಿ ಸುದ್ದಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವ ಸಣ್ಣಕ್ಕಿ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಮಗನಿಗೆ ದಸರಾ ಉಡುಗೊರೆ ಕೊಟ್ಟಿದ್ದಾರೆ. ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ಇಂದು ದ್ವಿಚಕ್ರ ವಾಹನ ಕೊಡಿಸಿದ್ದಾರೆ.
ಬಾಗವ್ವ ತನ್ನ ಮಗ ಹೊಸ ಬೈಕ್ ಖರೀದಿಸಲು ಮುಂಗಡ ಹಣವನ್ನು ನೀಡಿದ್ದಾರೆ. ಇಂದು ಹೊಸ ಬೈಕ್‌ಗೆ ಬಾಗವ್ವ ಪೂಜೆ ಸಲ್ಲಿಸಿ, ಬೈಕ್ ಕೀಯನ್ನು ಮಗನಿಗೆ ಹಸ್ತಾಂತರ ಮಾಡಿದ್ದಾರೆ.
ಈ ಕುರಿತು ತಾಯಿ ಬಾಗವ್ವಾ ಸಣ್ಣಕ್ಕಿ ಮಾತನಾಡಿ, ಗೃಹಲಕ್ಷ್ಮಿ ಹಣದಲ್ಲಿ ಬಂಗಾರ ಖರೀದಿಸಬೇಕೆಂಬ ಆಸೆ ಇತ್ತು. ಆದರೆ, ಮಗನಿಗೆ ಬೈಕ್ ಬೇಕಾಗಿತ್ತು. ಹಾಗಾಗಿ, ನಾನು ಮತ್ತು ಸೊಸೆ ಹಣ ಕೂಡಿಸಿಕೊಟ್ಟೆವು. ಗೃಹಲಕ್ಷ್ಮಿ ಹಣ ನಮ್ಮ ಬಾಳಿಗೆ ತುಂಬಾ ಅನುಕೂಲವಾಗಿದೆ ಎಂದರು.
ಈ ವಿಚಾರ ತಿಳಿದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿ, ಗೃಹಲಕ್ಷ್ಮಿ ಯೋಜನೆಯ ಹಣ ಇಂದು ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬದುಕು ಕಟ್ಟಿಕೊಳ್ಳಲು ನೆರವಾಗಿದೆ.
ನವರಾತ್ರಿ ಹಬ್ಬದಂದು ದ್ವಿಚಕ್ರ ವಾಹನ ಕೊಳ್ಳಲು ಮುಂದಾಗಿರುವ ಮಗನಿಗೆ ತಾಯಿ ಗೃಹಲಕ್ಷ್ಮಿ ಹಣ ನೀಡಿರುವ ವಿಷಯ ಕೇಳಿ ಖುಷಿಯಾಯಿತು. ಅವರಿಗೆ ಮನಃಪೂರ್ವಕ ಶುಭ ಕೋರುತ್ತೇನೆ ಎಂದು ತಿಳಿಸಿದರು.