ಬೆಂಗಳೂರು: ಈವೆಂಟ್ ಮ್ಯಾನೇಜ್ಮೆಂಟ್ ಉದ್ಯಮದ ನೆಪದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಗಂಡ-ಹೆಂಡತಿಯನ್ನು ಸಿಸಿಬಿಯ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ.
ಪಟ್ಟೆಗಾರಪಾಳ್ಯದ ನಿವಾಸಿಗಳಾಗಿರುವ ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ದಂಪತಿಗಳು.
ರಾಕೇಶ್ ಹಾಗೂ ಪೂಜಾ ಎಂಬ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದರೆನ್ನಲಾದ ಈ ಆರೋಪಿಗಳು, ಬಡ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಉದ್ಯೋಗದ ಭರವಸೆ ನೀಡುತ್ತಿದ್ದರು.
ಬಳಿಕ ಅವರನ್ನು ಈವೆಂಟ್ ಮ್ಯಾನೇಜ್ಮೆಂಟ್ ಕೆಲಸದ ನೆಪದಲ್ಲಿ ವಾರಕ್ಕೊಮ್ಮೆ ತಮಿಳುನಾಡು, ಪಾಂಡಿಚೇರಿ ರೆಸಾರ್ಟ್ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಕರೆದೊಯ್ದು ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳುತ್ತಿದ್ದರು.
ಅನ್ಯ ರಾಜ್ಯದ ಶ್ರೀಮಂತ ಉದ್ಯಮಿಗಳು, ರೆಸಾರ್ಟ್ಗಳಿಗೆ ಭೇಟಿ ನೀಡುತ್ತಿದ್ದವರಿಂದ 25 ಸಾವಿರದಿಂದ 50 ಸಾವಿರದವರೆಗೂ ಹಣ ಪಡೆದು ದಂಧೆ ನಡೆಸುತ್ತಿದ್ದ ಆರೋಪಿಗಳು, ಮದ್ಯವನ್ನೂ ಸಹ ಪೂರೈಸುತ್ತಿದ್ದರು ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ಅಕ್ರಮವಾಗಿ ಯುವತಿಯರನ್ನು ಕರೆದೊಯ್ಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ವೇಳೆ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.