ದೊಡ್ಡಬಳ್ಳಾಪುರ: ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಚಂಡಮಾರುತ (weather) ತೀವ್ರ ಸ್ವರೂಪಪಡೆದಿದ್ದು, ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಬುಧವಾರವೂ ಮುಂದುವರೆದಿದೆ.
ಇಂದು ಬೆಳಿಗ್ಗೆಯಿಂದ ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರದಲ್ಲಿ ಭಾರೀ ಮಳೆಸುರಿಯುತ್ತಿತ್ತು. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಸೋಮವಾರ ಮುಂಜಾನೆಯಿಂದ ಆರಂಭವಾಗಿರುವ ಮಳೆ ಸತತವಾಗಿ ಬೀಳುತ್ತಿದ್ದು, ಆಗೋಮ್ಮೆ ಈಗೊಮ್ಮೆ ಬಿಡುವು ನೀಡಿ ಮತ್ತು ಸುರಿಯುತ್ತಿದೆ. ಮಂಗಳವಾರ ಹಾಗೂ ಬುಧವಾರ ಇದೇ ವಾತಾವರಣ (weather) ಮುಂದುವರೆದಿದ್ದು, ಮಳೆಯಿಂದಾಗಿ ಶಾಲೆ, ಕಾಲೇಜು, ಕಚೇರಿಗೆ ತೆರಳುವ ಮಕ್ಕಳು, ನೌಕರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಬೆಳಿಗ್ಗೆ 8 ಗಂಟೆಯ ನಂತರ ಮಳೆ ಬಿಡುವು ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ವರುಣ ಮತ್ತಷ್ಟು ಆರ್ಭಟಿಸುತ್ತಿರುವುದು ಎಲ್ಲಾ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ. ಕೆಲವರು ಕೆಲಸಗಳಿಗೆ ಹೋಗಲಾಗದೆ ರಜೆ ಹಾಕಿ ಮನೆಯಲ್ಲಿದ್ದರೆ, ಇನ್ನುಕೆಲವರು ದ್ವಿಚಕ್ರ ವಾಹನಗಳನ್ನು ಬಿಟ್ಟು ಆಟೋ ರಿಕ್ಷಾಗಳನ್ನು ಆಶ್ರಯಿಸಿ ಕೆಲಸಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಧಾರಾಕಾರ ಮಳೆ (ಆರೆಂಜ್ ಅಲರ್ಟ್) ಇರುವ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಮೇವಿಗೆ ಪರದಾಟ: ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಹಳ್ಳಿಗಳಲ್ಲಿ ಹಸು, ಕರು, ಎಮ್ಮೆ, ಮೇಕೆ, ಕುರಿಗಳನ್ನು ಮೇಯಿಸಲು ರೈತರು ಪರದಾಡುವಂತಾಗಿದ್ದು.
ಜಾನುವಾರುಗಳಿಗೆ ಮೇವು ಒದಗಿಸಲು ತುಂಬಾ ಕಷ್ಟಪಡುವಂತಾಗಿದೆ. ಮೋಡ ಕವಿದ ವಾತಾವರಣ ಮುಂದುವರೆದಿದೆ. ಇನ್ನು ಕೆಲ ದಿನಗಳ ಕಾಲ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (weather) ಮುನ್ಸೂಚನೆ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವರುಣ ಆರ್ಭಟಿಸುತ್ತಿರುವುದರಿಂದ ಈಗಾಗಲೇ ಆರೆಂಜ್, ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.