ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ರಾಜಕಾರಣ ಪ್ರಾರಂಭಿಸಿದೆ. ಕಾಂಗ್ರೆಸ್ ನಲ್ಲಿಯೇ ನನ್ನ ರಾಜಕಾರಣ ಮುಂದುವರೆಸುತ್ತೇನೆ. ಕೊನೆಯವರೆಗೂ ಕಾಂಗ್ರೆಸಿಗನಾಗಿಯೇ ಉಳಿಯಲಿದ್ದೇನೆ ಎಂದು ಸಿಪಿ ಯೋಗೇಶ್ವರ್ ನಮ್ಮ ಪಕ್ಷಕ್ಕೆ ಬಂದಿದ್ದಾರೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಿಪಿ ಯೋಗೇಶ್ವರ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬೇಷರತ್ತಾಗಿ ಯೋಗೇಶ್ವರ್ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು.
ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪಕ್ಷ ಮುನ್ನಡೆಯುತ್ತಿದೆ. ಆದರೆ ಇಷ್ಟು ದಿನ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ನಾಯಕನಾಗಿದ್ದೆ ಈಗ ಯಾವುದೇ ಷರತ್ತಿಲ್ಲದೇ ಪಕ್ಷ ಸೇರ್ಪಡೆಯಾಗುವುದಾಗಿ ಯೋಗೇಶ್ವರ್ ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ನುಡಿದರು.
ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ವೀಕರಿಸಿರುವ ಯೋಗೇಶ್ವರ್ ಅ. 24 ಗುರುವಾರದಂದು ಚನ್ನಪಟ್ಟಣ ಉಪಚುನಾವಣೆಗೆ (channapatna by election) ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ಸಿಪಿ ಯೋಗೇಶ್ವರ್ ಮಾತನಾಡಿ, ನಾನು ಸಂದರ್ಭಕ್ಕೆ ತಕ್ಕಂತೆ ಬಿಜೆಪಿ ಸೇರ್ಪಡೆಯಾಗಿದ್ದ ಜೆಡಿಎಸ್ ಎನ್‌ಡಿಎಗೆ ಸೇರಿದ ಬಳಿಕ ನನ್ನ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲ ಎಂದು ಮನಗಂಡು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಸ್ವಯಂ ಪ್ರೇರಿತವಾಗಿ ನಾನು ಯಾವುದೇ ಒತ್ತಡ ಷರತ್ತುಗಳಿಲ್ಲದೇ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದರು.
ನಾನು ನೇರವಾಗಿ ಶಿವಕುಮಾರ್ ನಿವಾಸಕ್ಕೆ ಬಂದು ಚರ್ಚಿಸಿ, ಸಿಎಂ ಅವರನ್ನು ಭೇಟಿಯಾಗಿ ಬಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಮಲ್ಲಿಕಾರ್ಜುನ್ ಖರ್ಗೆ ಅವರೂ ಮಾತನಾಡಿ ಹಾರೈಸಿದ್ದಾರೆ. ನನ್ನ ರಾಜಕೀಯ ಶುರುಮಾಡಿದ ಪಕ್ಷಕ್ಕೆ ಮತ್ತೆ ಬಂದು ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಕಾಂಗ್ರೆಸ್ ಬಂದ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳನ್ನು ನೋಡಿ ಇದರಲ್ಲಿ ನಾನೂ ಕೈಜೋಡಿಸುವ ದೃಷ್ಟಿಯಿಂದ ಬಂದಿದ್ದೇನೆ ಎಂದರು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಹಳೆ ಮೈಸೂರು ಭಾಗದಲ್ಲಿ ಪ್ರಬಲ ನಾಯಕನಾಗಿರುವ ಸಿಪಿ ಯೋಗೇಶ್ವರ್ ಪಕ್ಷಕ್ಕೆ ಸೇರುತ್ತಿರುವುದು ಸಂತಸ ತಂದಿದೆ ಎಂದರು.
ಜಮೀರ್ ಅಹ್ಮದ್ ಮಾತನಾಡಿ ಯೋಗೇಶ್ವರ್ ಪಕ್ಷ ಸೇರ್ಪಡೆಯಿಂದ ಚೆನ್ನಪಟ್ಟಣದಲ್ಲಿ ಆನೆಬಲ ಬಂದಿದೆ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಪಕ್ಷದ ಬಾವುಟ ನೀಡಿ ಸಿಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಬರಮಾಡಿಕೊಂಡರು.