ಬೆಂಗಳೂರು ಗ್ರಾಮಾಂತರ; ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗಳಲ್ಲಿ ಚನ್ನಪಟ್ಟಣ ವಿಧಾನಸಭಾ ಚುನಾವಣೆ (channapatna by election) ರಾಜ್ಯಾದ್ಯಂತ ವಿಶೇಷ ಗಮನ ಸೆಳೆಯುತ್ತಿದೆ.
ಹಾಲಿ ಕೇಂದ್ರ ಮಂತ್ರಿ, ಮಾಜಿ ಸಿಎಂ, ಜೆಡಿಎಸ್ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ಕೇಂದ್ರ ಬಿಜೆಪಿ ನಾಯಕರು ಚನ್ನಪಟ್ಟಣ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ. ಆದರೆ ರಾಜ್ಯ ಬಿಜೆಪಿ ನಾಯಕರು ಯೋಗೇಶ್ವರ್ ಅವರನ್ನು ಎತ್ತಿಕಟ್ಟಿ ಇನ್ನಿಲ್ಲ ಷಡ್ಯಂತ್ರ ರೂಪಿಸುತ್ತಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕುಮಾರಸ್ವಾಮಿ ಅವರ ಅರ್ಹತೆ, ಜನಮನ್ನಣೆ ತಿಳಿದಿರುವ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ನಾಯಕರು ನೀಡುತ್ತಿರುವ ಗೌರವ ರಾಜ್ಯ ಬಿಜೆಪಿ ನಾಯಕರಿಗೆ ಸಹಿಸಲು ಸಾಧ್ಯವಾಗ್ತಾ ಇಲ್ಲ.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಸಮಸ್ಯೆ ಬಗ್ಗೆ ಕನಿಷ್ಠ ಮಾತನಾಡಲು ಅರ್ಹತೆ ಇರದ ರಾಜ್ಯ ಬಿಜೆಪಿ ನಾಯಕರಿಗೆ, ಮೋದಿ ಅವರು ಜೆಡಿಎಸ್ ವರಿಷ್ಠರಾದ ದೇವೇಗೌಡ ಕುಮಾರಸ್ವಾಮಿ ಅವರ ಬಗ್ಗೆ ಹೊಂದಿರುವ ಅಪಾರ ಗೌರವ ಅಸಹನೆಗೆ ಕಾರಣವಾಗಿದೆ.
ಈ ಕಾರಣದಿಂದಲೇ ಕುಮಾರಸ್ವಾಮಿ ಅವರ ವರ್ಚಸ್ಸು ಕುಗ್ಗಿಸಲು, ಚನ್ನಪಟ್ಟಣ ಉಪಚುನಾವಣೆಯನ್ನು ಬಳಸಿಕೊಳ್ಳುತ್ತಿದ್ದು, ಯೋಗೇಶ್ವರ್ ಅವರನ್ನು ದಾಳವಾಗಿ ಉರುಳಿಸಿದ್ದಾರೆಂದು ಆರೋಪಿಸಿದರು.
ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಎಂಬುದನ್ನು ರಾಜ್ಯ ಬಿಜೆಪಿ ನಾಯಕರು ಅರ್ಥ ಮಾಡಿಕೊಂಡು ನ್ಯಾಯಯುತವಾಗಿ ಮೈತ್ರಿ ನಿಯಮ ಪಾಲನೆ ಮಾಡಬೇಕಿದೆ.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದ ಮುನೇಗೌಡ, ಸಿ.ಪಿ.ಯೋಗೇಶ್ವರ್‌ರವರು ವಿಧಾನಪರಿಷತ್ ಸದಸ್ಯರಾಗಿ ಇನ್ನು ಎರಡು ವರ್ಷ ಅಧಿಕಾರದ ಅವಧಿ ಇದ್ದರೂ ಸಹ ಕೇವಲ ವೈಯಕ್ತಿಕ ಸ್ವಾರ್ಥ ಹಾಗೂ ದ್ವೇಷ ರಾಜಕಾರಣ ದಿಂದ ಹುಬ್ಬಳ್ಳಿಗೆ ಹೋಗಿ ಸ್ಪೀಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವುದು ಖಂಡನಿಯ.
ಕಮಲ-ದಳ ಮೈತ್ರಿಯಿಂದಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಎರಡು ಪಕ್ಷಗಳಿಗೆ ಅನುಕೂಲವಾಗಿದೆ. ಇದನ್ನು ರಾಜ್ಯ ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ಕುಮಾರಸ್ವಾಮಿ ಅವರ ಬಗ್ಗೆ ದ್ವೇಷ, ಜೆಡಿಎಸ್ ಪಕ್ಷವನ್ನು ತುಳಿಯುವ ಯತ್ನಕ್ಕೆ ಮುಂದಾಗಬಾರದು.
ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಜೊತೆ ಕೈಜೋಡಿಸಿ ಜೆಡಿಎಸ್ ಪಕ್ಷದ ಅಸ್ತಿತ್ವಕ್ಕೆ ತಕ್ಕೆ ತರಲು ಈ ಷಡ್ಯಂತ್ರ ರೂಪಿಸುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ತಕ್ಕ ಉತ್ತರ ನೀಡುತ್ತಾರೆ ಎಂದು ಮುನೇಗೌಡ ಎಚ್ಚರಿಕೆ ನೀಡಿದರು.