ಬೆಂಗಳೂರು: ಎನ್‌ಡಿಎ ಮೈತ್ರಿ ಮೂಲಕ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿ ಮೋದಿ ಅವರನ್ನು ಪ್ರಧಾನಿಯಾಗಲು ಸಂಸದರನ್ನು ಆಯ್ಕೆ ಮಾಡಲು ನೆರವಾಗಿದ್ದಕ್ಕೆ ಚನ್ನಪಟ್ಟಣ ಉಪಚುನಾವಣೆ ವೇಳೆ ಬಿಜೆಪಿ ರಾಜ್ಯ ನಾಯಕರು ಜೆಡಿಎಸ್ ಬೆನ್ನಿಗೆ ಹಿರಿದಿದ್ದಾರೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಕಿಡಿಕಾರಿದರು.
ಚನ್ನಪಟ್ಟಣ ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿ, ಇದು ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಜೊತೆಗಿನ ಒಳಒಪ್ಪಂದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದಿದ್ದಕ್ಕೆ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಕಾರಣವಾಯಿತು. ಇಲ್ಲವಾದರೆ ಗ್ಯಾರಂಟಿ ಅಲೆಯಲ್ಲಿ ಒಂದು ಸ್ಥಾನ ಕೂಡ ಬಿಜೆಪಿ ಗೆಲ್ಲುತ್ತಿರಲಿಲ್ಲ.
ಆದರೆ ಈ ವಿಶ್ವಾಸ ವಿರದ ರಾಜ್ಯ ಬಿಜೆಪಿ ನಾಯಕರು, ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಜೆಡಿಎಸ್‌ಗೆ ಬಿಟ್ಟುಕೊಟ್ಟರು, ಒಳಗೊಳಗೆ ಯೋಗೇಶ್ವರ್ ಅವರನ್ನು ಎತ್ತಿಕಟ್ಟಿ ಗೊಂದಲ ಸೃಷ್ಟಿಸಿದ್ದಲ್ಲದೆ. ಈಗ ಒಳಒಪ್ಪಂದಂತೆ ಕುಮಾರಸ್ವಾಮಿ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಅವಮಾನವನ್ನುಂಟು ಮಾಡಲು ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಸೇರ್ಪಡೆಗೊಳ್ಳುವಂತೆ ಮಾಡಿದ್ದು, ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಮುಂದಾಗಿದ್ದಾರೆ ಎಂದರು.
ಮುನೇಗೌಡರ ಮಾತು ಸತ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಅವರ ಮಾತು ಸತ್ಯ. ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿ ಅವರ ವರ್ಚಸ್ಸು ಹಾಳಲು ಮಾಡಲು ಕರ್ನಾಟಕದ ಬಿಜೆಪಿ ಮುಖಂಡರು ಷಡ್ಯಂತ್ರ ರೂಪಿಸಿದ್ದಾರೆ.
ಇದು ದೊಡ್ಡಬಳ್ಳಾಪುರದಲ್ಲಿಯೂ ನಡೆಯುತ್ತಿದ್ದು, ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಅಧ್ಯಕ್ಷ ಸ್ಥಾನ ಕೈತಪ್ಪಲು ಬಿಜೆಪಿ ಮುಖಂಡರು ಮಾಡಿದ ಷಡ್ಯಂತ್ರ ಕಾರಣ ಎಂಬುದನ್ನು ಮುನೇಗೌಡರು ಅರ್ಥಮಾಡಿಕೊಳ್ಳಬೇಕು ಎಂದು ಹರೀಶ್ ಗೌಡ ತಿಳಿಸಿದ್ದಾರೆ.