ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಇಂದು ಸಿಎಂ, ಡಿಸಿಎಂ ನೇತೃತ್ವದಲ್ಲಿ ಬೃಹತ್ ರೋಡ್ ಶೋ ನಡೆಸಿ, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ (channapatna by election) ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಯೋಗೇಶ್ವರ್ ಅವರ ವಿರುದ್ದ ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಜೆಡಿಎಸ್ ನಾಯಕರು ತಮ್ಮ ಪಕ್ಷದಿಂದ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಾಗಿ ಕೊನೆಯ ಕ್ಷಣದ ಕಸರತ್ತು ಅಂತಿಮ ಹಂತಕ್ಕೆ ಬಂದಿದ್ದು, ಇಂದು ಅಪರಾಹ್ನ 3.30ಕ್ಕೆ ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗೋಷ್ಠಿಗೆ ಕರೆ ನೀಡಲಾಗಿದೆ.
ಈ ಸುದ್ದಿಗೋಷ್ಠಿಯಲ್ಲಿ ಚನ್ನಪಟ್ಟಣ ಉಪಚುನಾವಣೆಯ NDA ಅಭ್ಯರ್ಥಿ ಯಾರಾಗಲಿದ್ದಾರೆಂಬುದು ಘೋಷಣೆಯಾಗಲಿದೆ.
NDA ವರಿಷ್ಠ ನಾಯಕರಾದ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ H.D.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ BS ಯಡಿಯೂರಪ್ಪ ಅವರು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮೈತ್ರಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ (channapatna by election) ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯೋಗೇಶ್ವರ್ ಅವರೇ ನೇರ ಎದುರಾಳಿಯಾಗಿರುವುದರಿಂದ ದೇವೇಗೌಡರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಿದರೆ ಮಾತ್ರ ಪ್ರಬಲ ಪೈಪೋಟಿ ನೀಡಬಹುದು ಎಂಬ ಅಭಿಪ್ರಾಯ ಪಕ್ಷದಲ್ಲಿ ಬಲವಾಗಿ ವ್ಯಕ್ತವಾಗುತ್ತಿದೆ. ಈ ಪೈಕಿ ನಿಖಿಲ್ ಕುಮಾರಸ್ವಾಮಿ ಹೆಸರು ಮುಂಚೂಣಿಯಲ್ಲಿದೆ.
ಆದರೆ, ಮಹಿಳೆಯೊಬ್ಬರನ್ನು ಅಭ್ಯರ್ಥಿಯಾಗಿಸಿದರೆ ಹೇಗೆ ಎಂಬ ಚಿಂತನೆಯೂ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಪತ್ನಿ ಅನಸೂಯ ಅವರ ಹೆಸರುಗಳೂ ಕೇಳಿಬರುತ್ತಿವೆ.
ಈ ನಡುವೆ ಕುಟುಂಬದವರು ಬೇಡ ಎನ್ನುವುದಾದರೆ ಪಕ್ಷದ ಕಾರ್ಯಕರ್ತರ ಪೈಕಿ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದ್ದು, ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಯಾರೆಂಬುದು ತಿಳಿದುಬರಲಿದೆ.