
ಮಂಡ್ಯ: ಅಧಿಕಾರಕ್ಕೆ ತಮ್ಮ ಕುಟುಂಬದವರನ್ನು ತರಲು ದೇವೇಗೌಡರ ಕುಟುಂಬದವರು ಒಂದೊಂದು ನರಬಲಿ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ.
ನಾಗಮಂಗಲದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಮಾಡಲು ಯೋಗೇಶ್ವರ್ ಶ್ರಮಪಟ್ಟಿದ್ದರು. ಆದರೆ, ಈಗ ಯೋಗೇಶ್ವರ್ ಬಲಿಯಾಗಿ ಹೋದರು. ಚನ್ನಪಟ್ಟಣ ಜನ ದಡ್ಡರಲ್ಲ, ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಚನ್ನಪಟ್ಟಣದಲ್ಲಿ ನಿಖಿಲ್ ಅಲ್ಲ, ಕುಮಾರಸ್ವಾಮಿ ನಿಂತರೂ ಏನು ಮಾಡಲಾಗಲ್ಲ. ಯೋಗೇಶ್ವರ್ ಆಚೆ ಕಳುಹಿಸಲು ಬಿವೈ ವಿಜಯೇಂದ್ರ, ಬಿಎಸ್ ಯಡಿಯೂರಪ್ಪ ಕಾರಣ. ಬಿಜೆಪಿ ಗುಂಪುಗಾರಿಕೆಯಿಂದ ಯೋಗೇಶ್ವರ್ ಆಚೆ ಹೋದರು. ಪಾಪ ನಿಖಿಲ್‌ರನ್ನು ಮೂರನೇ ಸರಿ ಆಹುತಿ ಕೊಡ್ತಾವ್ರೆ ಎಂದು ಹೇಳಿದರು.
ಕುಮಾರಸ್ವಾಮಿ 2 ಬಾರಿ ಲಾಟರಿಯಲ್ಲಿ ಮುಖ್ಯಮಂತ್ರಿ ಆದವರು. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಗಾಡಿ ನಿಂತು ಹೋಗಿತ್ತು. ಪಾಪ ಮುಳುಗುವ ಹಡಗು ಎಂದು ಮಂಡ್ಯ ಜನ ಕೈ ಹಿಡಿದರು. ಉನ್ನತ ಹುದ್ದೆಯಲ್ಲಿದ್ದು ಕುಮಾರಸ್ವಾಮಿ ಏನ್ ಮಾಡ್ತಿದ್ದಾರೆ. ಮಂಡ್ಯದಲ್ಲಿ 4 ದಿನ ಬೆಂಗಳೂರಲ್ಲಿ 4 ದಿನ ಇರ್ತಾರೆ.
ದೇಶ-ವಿದೇಶ ಸುತ್ತಿ ಬೃಹತ್ ಕೈಗಾರಿಕಾಗಳ ಸ್ಥಾಪನೆ ಮಾಡಬೇಕಿತ್ತು. ಆದರೆ ರಾಜ್ಯಕ್ಕೆ ಬಂದಾಗಲೆಲ್ಲಾ ಮುಡಾ ಕೇಸು, ಡಿಕೆಶಿ ಮುಖ ಕೆರೆಯುವ ಕೆಲಸ ಮಾಡ್ತಿದ್ದಾರೆ. ದೊಡ್ಡ ದೊಡ್ಡ ಕೈಗಾರಿಕಾ ತಂದು ಮಂಡ್ಯ ಜನರ ಋಣ ತೀರಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಬೇಕು ಎಂದರು.
ಮಂಡ್ಯ ಜಿಲ್ಲೆಯ ಮುಖಂಡರು ಈಗಲಾದರೂ ಎಚ್ಚೆತ್ತುಕೊಳ್ಳಿ. ನಿಮ್ಮಲ್ಲೂ ಗಂಡಸರಿದ್ದಾರೆ. ಹಾಸನದಿಂದ ಕರೆತಂದು ಮಂಡ್ಯದಲ್ಲಿ ಗಂಡಸರು ಮಾಡುವ ಅಗತ್ಯವಿಲ್ಲ, ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಮಂಡ್ಯ ಜಿಲ್ಲೆಯ ಜನತೆಗೆ ಕರೆ ಕೊಡ್ತೀನಿ ಎಂದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						