
ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಚನ್ನಪಟ್ಟಣ ಕ್ಷೇತ್ರದ ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡಿದ್ದರು.
ಸಮನ್ವಯ ಸಭೆ ಮುಗಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು ಚನ್ನಪಟ್ಟಣ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ನಿನ್ನೆದಿನ (ಶುಕ್ರವಾರ) ನಾಮಪತ್ರ ಸಲ್ಲಿಸಿದ್ದೇನೆ.ಮೈತ್ರಿ ಪಕ್ಷದ ನಾಯಕರು ಕೂತು ಚರ್ಚೆ ಮಾಡಿ ತೆಗೆದುಕೊಂಡ ನಿರ್ಧಾರದಿಂದ ನಾನು ಚನ್ನಪಟ್ಟಣ ಕ್ಷೇತ್ರದ NDA ಅಭ್ಯರ್ಥಿ ಆಗಿದ್ದೇನೆ ಎಂದು ತಿಳಿಸಿದರು.
ನಾನು ಉಪಚುನಾವಣೆಗೆ ಸಿದ್ದನಾಗಿರಲಿಲ್ಲ. ಆದರೆ ಬದಲಾದ ರಾಜಕಾರಣ ನನ್ನನ್ನ ಎನ್ ಡಿ ಎ ಅಭ್ಯರ್ಥಿಯನ್ನಾಗಿ ಮಾಡಿದೆ. ಬಿಜೆಪಿ ಸ್ಥಳೀಯ ಮುಖಂಡರು ಇಂದಿನ ಸಭೆಯಲ್ಲಿ ನಮ್ಮ ಗೆಲುವಿಗೆ ಶ್ರಮ ಪಡೋದಾಗಿ ಮಾತುಕೊಟ್ಟಿದ್ದಾರೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಶಿಗ್ಗಾವಿ, ಸಂಡೂರು, ಮತ್ತು ಚನ್ನಪಟ್ಟಣ ಮುರು ಕ್ಷೇತ್ರಗಲ್ಲೂ ಎನ್ ಡಿ ಎ ಅಭ್ಯರ್ಥಿ ಗಳ ಗೆಲುವಿಗೆ ಶ್ರಮವಹಿಸುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಚನ್ನಪಟ್ಟಣ ಪ್ರಚಂಡ ಗೆಲುವು ಬಿಜೆಪಿ ಕಾರ್ಯಕರ್ತರ ಸಂಕಲ್ಪವಾಗಿದೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಮತದಾರರೇ ನಿರ್ಧರಿಸಿರುವ ಉಪ ಚುನಾವಣೆಯಲ್ಲಿ ಎನ್.ಡಿ.ಎ ನೇತೃತ್ವದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ದಾಖಲೆಯ ಮತಗಳ ಅಂತರಗಳಿಂದ ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಮರ್ಪಣಾ ಭಾವದಿಂದ ಹಗಲಿರುಳೆನ್ನದೆ ಶ್ರಮಿಸಬೇಕೆಂಬ ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಸಭೆ ಸದಸ್ಯರಾದ ಲೆಹರ್ ಸಿಂಗ್ ಅವರು, ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ರುದ್ರೇಶ್ ಅವರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅ.ದೇವೇಗೌಡರು ಸೇರಿದಂತೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಮೈತ್ರಿಕೂಟದ ಎಲ್ಲ ನಾಯಕರು ಉಪಸ್ಥಿತರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						