
ಹಾವೇರಿ: ಕಳೆದ ಒಂದೂವರೆ ವರ್ಷದ ಕಾಂಗ್ರೆಸ್ ನ ದುರಾಡಳಿತ ಮತ್ತು ದೌರ್ಜನಕ್ಕೆ ಈ ಉಪ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರೆಂಟಿ ಗಳು ಕೈ ಹಿಡಿಯುತ್ತವೆ ಎಂದು ಕಾಂಗ್ರೆಸ್ ನವರು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಹಾವೇರಿ ಗದಗ ಜಿಲ್ಲೆಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದೆ, ಆಗ ಸ್ವಲ್ಪ ವ್ಯತ್ಯಾಸ ಆಗಿದೆ. ಆದರೆ, ನಮ್ಮ ಕಾರ್ಯಕರ್ತರಿಗೆ ಈಗಾಗಲೇ ಅದರ ಅರಿವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿ ಜನರು ಬೆಂಬಲ ಕೊಟ್ಟಿದ್ದರೋ ಅದೇ ರೀತಿ ಈಗ ಜನ ಬೆಂಬಲ ಸಿಗಲಿದೆ. ನಮ್ಮ ಕಾರ್ಯಕರ್ತರು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ನವರು ರೌಡಿ ಶೀಟರ್ ಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನವರೇ ಆರೋಪ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟೀಕರಣ ನೀಡಬೇಕು ಎಂದರು.
ಸಚಿವ ಜಮೀರ್ ಅಹಮದ್ ಅವರ ಸಲಾವಿನ ಕುರಿತು ಕೇಳಿದ ಪ್ರಶ್ನೆಗೆ ಅವರ ಸವಾಲು ಹಾಸ್ಯಾಸ್ಪದವಾಗಿದ್ದು, ಸತ್ಯಕ್ಕೆ ದೂರವಾಗಿದೆ ಎಂದರು.
ಶಿಗ್ಗಾವಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ನಡೆಯುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ನಾವೆಲ್ಲರೂ ಒಕ್ಕಟ್ಟಾಗಿದ್ದೇವೆ. ಎಲ್ಲ ಸಮುದಾಯದವರು ನಮಗೆ ಬೆಂಬಲ ಸೂಚಿಸಿದ್ದಾರೆ. ಈ ಚುನಾಚಣೆಯಲ್ಲಿ ನನಗಿಂತ ಹೆಚ್ಚು ಬೆಂಬಲ ಭರತ್ ಬೊಮ್ಮಾಯಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿಯವರ ಮನವೊಲಿಕೆಯಿಂದ ನಮಗೇನು ಪರಿಣಾಮ ಬೀರುವುದಿಲ್ಲ. ಅದು ಕಾಂಗ್ರೆಸ್ ಗೆ ಸಂಬಂಧಿಸಿದ ವಿಚಾರ ಎಂದರು.
ಕಾಂಗ್ರೆಸ್ ನವರು ಹೋಬಳಿಗೊಬ್ಬ ಸಚಿವರು ಬರಲಿದ್ದಾರೆ ಎಂಬ ಪ್ರಶ್ನೆಗೆ ಬರಲಿ ಅವರಿಗೆ ಸ್ವಾಗತ ಎಂದು ಹೇಳಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						