ಹೈದರಾಬಾದ್: ಮಗ ಮೃತಪಟ್ಟಿರುವ ವಿಚಾರ ತಿಳಿಯದ ಅಂಧ ದಂಪತಿ ನಾಲ್ಕು ದಿನಗಳ ಕಾಲ ಮಗನ ಮೃತದೇಹದೊಂದಿಗೆ ಮನೆಯಲ್ಲೇ ಕಳೆದಿರುವ ಹೃದಯ ವಿದ್ರಾವಕ ಘಟನೆ ತಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ.
ನಾಗೋಲ್‌ನ ಅಂಧು ಕಾಲೋನಿಯಲ್ಲಿ ಮನೆಯೊಂದರಲ್ಲಿ ಮಗನೊಂದಿಗೆ ವೃದ್ಧ ದಂಪತಿ ವಾಸವಿದ್ದರು. ದಂಪತಿ ಇಬ್ಬರು ಕೂಡಾ ಅಂಧರಾಗಿದ್ದಾರೆ.
ಸುಮಾರು ನಾಲ್ಕು ದಿನಗಳ ಹಿಂದೆ ಮಗ ಮೃತಪಟ್ಟ ವಿಚಾರ ತಿಳಿಯದೇ, ಅನ್ನ ನೀರಿಲ್ಲದೇ ಯಾರ ಸಹಾಯವನ್ನೂ ಪಡೆಯಲಾಗದೆ ದಂಪತಿ ಮನೆಯಲ್ಲೇ ಇದ್ದರು.
ಅಕ್ಟೋಬರ್ 28 ರಂದು ಸ್ಥಳೀಯರು ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ದಂಪತಿಯಿಬ್ಬರೂ ಮಗನ ಶವದೊಂದಿಗೆ ಅರೆಪ್ರಜ್ಞಾಸ್ಥಿತಿಯಲ್ಲಿರುವುದು ಕಂಡುಬಂದಿದೆ.
ದಂಪತಿಯ ಕಿರಿಯ ಮಗ ಪ್ರಮೋದ್ ಶನಿವಾರ ಮದ್ಯದ ಅಮಲಿನಲ್ಲಿ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ
ಸತತ ಮೂರು ದಿನಗಳಿಂದ ಸಹಾಯಕ್ಕಾಗಿ ದಂಪತಿ ಕೂಗಾಡಿದ್ದರೂ ನೆರೆಹೊರೆಯವರಿಗೆ ಅವರ ಕೂಗು ಕೇಳಿಸಿರಲಿಲ್ಲ. ಆದರೆ ಮನೆಯಿಂದ ದುರ್ವಾಸನ ಬರತೊಡಗಿದಾಗ ಸ್ಥಳೀಯರು ಅನುಮಾನಗೊಂಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಅನ್ನ ನೀರಿಲ್ಲದೆ ಇದ್ದ ವೃದ್ಧ ದಂಪತಿಗೆ ಆರೈಕೆ ಮಾಡಲಾಗಿದೆ. ಅವರ ಹಿರಿಯ ಮಗ ಪ್ರದೀಪ್‌ಗೆ ವಿಚಾರ ತಿಳಿಸಲಾಗಿದೆ.
ಮೃತದೇಹವನ್ನು ಉಸ್ಮಾನಿಯಾ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.