ದೊಡ್ಡಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ರಾಜ್ಯದ ಅನೇಕ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ನವೆಂಬರ್ 13ರಂದು ನಡೆಯಲಿರುವ ಚುನಾವಣೆಗೆ ನೆನ್ನೆಯಷ್ಟೇ 40 ಜನರ ಸ್ಟಾರ್ ಪ್ರಚಾರಕ ಪಟ್ಟಿಯನ್ನು ಕೇಂದ್ರ ಸಚಿವರು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಚುನಾವಣಾ ಆಯೋಗಕ್ಕೂ ಪಟ್ಟಿಯನ್ನ ರವಾನೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ನೇತೃತ್ವದ ತಂಡವನ್ನು ಚುನಾವಣೆ ಕಾರ್ಯಕ್ಕೆ ತೆರಳುವಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು ಸೂಚನೆ ನೀಡಿದ್ದಾರೆ.
ಜಿಪಂ ಮಾಜಿ ಸದಸ್ಯ ಅಪ್ಪಯ್ಯಣ್ಣ ಜೊತೆ ದೀಪಾವಳಿ ಹಬ್ಬಕ್ಕೆ ಶುಭಕೋರಲು ತೆರಳಿದ್ದ ಬಿ.ಮುನೇಗೌಡ ಅವರಿಗೆ ದೇವೇಗೌಡ ಅವರು ಸೂಚನೆ ನೀಡಿದ್ದು, ಮುಖಂಡರೊಂದಿಗೆ ಚುನಾವಣೆ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿ.ಮುನೇಗೌಡ, ಹೆಚ್.ಅಪ್ಪಯ್ಯಣ್ಣ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷ ಸತೀಶ್, ಮಧುರೆ ಹೋಬಳಿ ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಮಣ್ಣ, ವಕ್ತಾರ ಕುಂಟನಹಳ್ಳಿ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಕಸಬ ಹೋಬಳಿ ಮುಖಂಡರಾದ ಹನುಮಂತೆ ಗೌಡ ಅವರು ಚನ್ನಪಟ್ಟಣಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ.