
ಬೆಂಗಳೂರು: ಕೈಗಾರಿಕಾ ಕ್ಷೇತ್ರದ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಸದ್ಯಕ್ಕೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು, 2025ರ ಜೂನ್ ವೇಳೆಗೆ ದ್ವಿತೀಯ ಸ್ಥಾನಕ್ಕೆ ಏರಲಿದೆ. ಈಗ ಆಗಿರುವ 54,427 ಕೋಟಿ ರೂ. ಹೂಡಿಕೆಯ ಜತೆಗೆ ಮುಂದಿನ ಆರೇಳು ತಿಂಗಳಲ್ಲಿ ಇನ್ನೂ 19,059 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರುವುದು ಖಾತ್ರಿಯಾಗಿದೆ. ಈ ಮೂಲಕ ರಾಜ್ಯವು 73 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯನ್ನು ಕಾಣಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಬುಧವಾರ ಹೇಳಿದ್ದಾರೆ.
ಅವರು ಜಿಕೆವಿಕೆ ಆವರಣದಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟಲ್ಸ್ ಸಂಸ್ಥೆಯ 78ನೇ ವಾರ್ಷಿಕ ತಾಂತ್ರಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯವು ಈ ವರ್ಷ ಈಗಾಗಲೇ 21 ವಿವಿಧ ಉದ್ಯಮಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ 46,375 ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, 27 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಗಳ ಮೂಲಕ 90 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆ ಆಗಲಿರುವಂತಹ ಒಟ್ಟು 669 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ. ಇವುಗಳಿಂದಾಗಿ 1.73 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಅವರು ವಿವರಿಸಿದ್ದಾರೆ.
ಕೈಗಾರಿಕಾ ಅಭಿವೃದ್ಧಿಯ ಜತೆಯಲ್ಲೇ ಪರಿಸರ ಸಂರಕ್ಷಣೆ ಮತ್ತು ಎಲ್ಲರನ್ನೂ ಒಳಗೊಂಡಿರುವ ಬೆಳವಣಿಗೆಗಳ ಜತೆಗೆ ಸಮತೋಲನ ಸಾಧಿಸುವ ಸವಾಲು ನಮ್ಮ ಮುಂದಿದೆ. ಮೆಟಲ್ಸ್ (ಲೋಹಗಳು) ಮತ್ತು ಮೆಟಿರೀಯಲ್ಸ್ ವಲಯಗಳಲ್ಲಿ ಇವೆಲ್ಲವನ್ನೂ ಸಾಧ್ಯವಾಗಿಸುವಂತಹ ಸಂಶೋಧನೆ ಮತ್ತು ನಾವೀನ್ಯತಾ ಉಪಕ್ರಮಗಳಿಗೆ ಸರಕಾರವು ಒತ್ತು ನೀಡುತ್ತಿದೆ ಎಂದು ಅವರು ನುಡಿದಿದ್ದಾರೆ.
ಮೆಟಲ್ಸ್ ಮತ್ತು ಮೆಟೀರಿಯಲ್ಸ್ ಕ್ಷೇತ್ರವೂ ಸೇರಿದಂತೆ ಎಲ್ಲ ವಲಯಗಳಲ್ಲೂ ಕರ್ನಾಟಕವು ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಲೋಹ ಮತ್ತು ಅದಕ್ಕೆ ಪೂರಕವಾದ ವಲಯಗಳು ಆರ್ಥಿಕ ಅಭಿವೃದ್ಧಿಯ ಆಚೆಗೂ ತಮ್ಮ ಪ್ರಭಾವ ಬೀರುತ್ತವೆ. ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿರುವ ಜಗತ್ತಿನಲ್ಲಿ ಉದ್ಭವಿಸುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ಉದ್ಯಮಿಗಳು ಸರಿಯಾದ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಮರ್ಥ ನೀತಿ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, `ರಾಜ್ಯ ಸರಕಾರವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮಾತ್ರವಲ್ಲದೆ ಸೆಮಿಕಂಡಕ್ಟರ್, ವಿದ್ಯುನ್ಮಾನ, ಚಿಪ್ ವಿನ್ಯಾಸ, ನವೋದ್ಯಮ, ವಿದ್ಯುಚ್ಚಾಲಿತ ವಾಹನ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆಯೂ ಸಮರ್ಥ ನೀತಿಗಳನ್ನು ಹೊಂದಿದೆ. ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಕೌಶಲಪೂರ್ಣವನ್ನಾಗಿಸಿ, ಅವರೆಲ್ಲರನ್ನೂ ಉದ್ಯೋಗಕ್ಕೆ ಅರ್ಹರನ್ನಾಗಿ ಸಜ್ಜುಗೊಳಿಸಲಾಗುವುದು’ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಈಗ ಡಿಜಿಟಲ್ ಉತ್ಪಾದನೆ, ಕೃತಕ ಬುದ್ಧಿಮತ್ತೆ ಮತ್ತು ಆಟೋಮೇಶನ್ ನಿರ್ಣಾಯಕವಾಗಿದ್ದು ಹೊಸ ಬಗೆಯ ಶಕ್ತಿಸಾಮರ್ಥ್ಯಗಳನ್ನು ತಂದುಕೊಟ್ಟಿವೆ.
ಸುಧಾರಿತ ಅಲಾಯ್ಸ್, ಅತ್ಯಧಿಕ ಸಾಮರ್ಥ್ಯದ ಉಕ್ಕು ಮತ್ತು ಸುಸ್ಥಿರ ಮೆಟೀರಿಯಲ್ ಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಈ ವಲಯದಲ್ಲಿ ರಾಜ್ಯದ ಹಲವು ನವೋದ್ಯಮಗಳು ಆಟೋಮೋಟೀವ್, ವೈಮಾಂತರಿಕ್ಷ, ಹಗುರ ಅಲಾಯ್ ಗಳಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿವೆ ಎಂದರು.
ರಾಜ್ಯವು ಹೆವಿ ಎಂಜಿನಿಯರಿಂಗ್, ವಿದ್ಯುತ್ ಉತ್ಪಾದನೆ ಮತ್ತು ಸ್ಪೆಷಲ್ ಪರ್ಪಸ್ ಮಷಿನರಿ ಕ್ಷೇತ್ರಗಳ ತಾಣವಾಗಿದೆ. ಮಶೀನ್ ಟೂಲ್ ತಯಾರಿಕೆಯಲ್ಲಿ ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.52ರಷ್ಟು ಕೊಡುಗೆ ನೀಡುತ್ತಿದೆ.
ಈ ಮೂಲಕ ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಯ ಬೇಡಿಕೆಗಳನ್ನು ಏಕಕಾಲಕ್ಕೆ ಪೂರೈಸಲಾಗುತ್ತಿದೆ. ಲೋಹ ಮತ್ತು ಮೆಟೀರಿಯಲ್ಸ್ ವಲಯಗಳ ಬೇಡಿಕೆಗಳನ್ನು ಸರಕಾರವು ಸಕಾರಾತ್ಮಕವಾಗಿ ಪರಿಗಣಿಸಿ, ಎಲ್ಲ ಬಗೆಯ ಪ್ರೋತ್ಸಾಹಗಳನ್ನೂ ಕೊಡಲಿದೆ ಎಂದು ಅವರು ಭರವಸೆ ನೀಡಿದರು.
ಐಐಎಂ ಅಧ್ಯಕ್ಷ ಸಜ್ಜನ್ ಜಿಂದಾಲ್, ಜಿಂದಾಲ್ ಅಧ್ಯಕ್ಷ ಪಿ.ಕೆ.ಮುರುಗನ್ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						