
ಬೆಳಗಾವಿ, (Belgavi); ವಿಧಾನಮಂಡಳ ಚಳಿಗಾಲ ಅಧಿವೇಶನ ಡಿ.9 ರಿಂದ ನಡೆಯಲಿದೆ. ಪ್ರತಿವರ್ಷದಂತೆ ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಥತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಸತಿ, ಸಾರಿಗೆ ಮತ್ತು ಊಟೋಪಹಾರ ಸೇರಿದಂತೆ ಯಾವುದೇ ಅನಾನುಕೂಲ ಆಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.
ವಿಧಾನಮಂಡಳ ಚಳಿಗಾಲ ಅಧಿವೇಶನದ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜರುಗಿದ ವಿವಿಧ ಉಪ ಸಮಿತಿಗಳ ಅಧ್ಯಕ್ಷರುಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಊಟೋಪಹಾರ ಕಲ್ಪಿಸುವವರಿಗೆ ಮುಂಚಿತವಾಗಿಯೇ ಆದೇಶ ನೀಡುವ ಮೂಲಕ ಉತ್ತಮ ವ್ಯವಸ್ಥೆಯನ್ನು ಖಚಿತಪಡಿಸಬೇಕು. ಇದರೊಂದಿಗೆ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯಕೀಯ ತಂಡಗಳು ಮತ್ತು ಆ್ಯಂಬ್ಯುಲೆನ್ಸ್ ಗಳನ್ನು ನಿಯೋಜಿಸಬೇಕು ಎಂದು ತಿಳಿಸಿದರು.
ಸುವರ್ಣ ವಿಧಾನಸೌಧದ ಒಳಗಡೆಯ ಕಾರಿಡಾರ್ ಗಳಲ್ಲಿ ಹಾಗೂ ಮೊಗಸಾಲೆಯಲ್ಲಿ ಪಾವತಿ ಆಧಾರದ ಮೇಲೆ ವಿವಿಧ ಬಗೆಯ ಚಹಾ ಹಾಗೂ ಅಲ್ಪೋಪಹಾರ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ತಿಳಿಸಿದರು.
ಇದಲ್ಲದೆ ಪ್ರತಿಭಟನಾ ಸ್ಥಳಗಳ ನಿರ್ವಹಣೆ ಹಾಗೂ ಸೂಕ್ತಭದ್ರತೆ ಬಗ್ಗೆಯೂ ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.
ನಗರದ ರಸ್ತೆಗಳು ಸೇರಿದಂತೆ ನಗರ ಪ್ರವೇಶಿಸುವ ರಸ್ತೆಗಳ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಂಡು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ನಿರ್ದೇಶನ ನೀಡಿದರು.
ವಸತಿ, ಸಾರಿಗೆ ಹಾಗೂ ಊಟೋಪಹಾರ ವ್ಯವಸ್ಥೆ ಸೇರಿದಂತೆ ಸುಗಮ ಅಧಿವೇಶನಕ್ಕಾಗಿ ಹತ್ತು ಸಮಿತಿಗಳನ್ನು ರಚಿಸಲಾಗಿದೆ. ಕಳೆದ ಬಾರಿಯಂತೆ ವಿವಿಧ ಸ್ಥಳಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಹೈಸ್ಪೀಡ್ ಸಾಮರ್ಥ್ಯದ ಅಂತರ್ಜಾಲ ಸಂಪರ್ಕ; ಕಂಪ್ಯೂಟರ್, ಲೇಖನ ಸಾಮಗ್ರಿಗಳು ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
ಇದಲ್ಲದೇ ಪ್ರತಿವರ್ಷದಂತೆ ಅಧಿವೇಷನದಲ್ಲಿ ಭಾಗವಹಿಸುವ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಲಾಪ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಪಾಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಸುವರ್ಣ ಸೌಧದ ಮುಖ್ಯ ಪ್ರವೇಶ ದ್ವಾರದಿಂದ ಒಳಗಡೆ ಆವರಣದವರೆಗೆ ಸಾರ್ವಜನಿಕರಿಗೆ ಕರೆದೊಯ್ಯಲು ಉಚಿತ ಬಸ್ ವ್ಯವಸ್ಥೆ ಕೂಡ ಈ ಬಾರಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಅಂದಾಜು 6 ಸಾವಿರ ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಪ್ರತಿವರ್ಷದಂತೆ ಬಿಗಿ ಭದ್ರತೆ ಕಲ್ಪಿಸಲಾಗುವುದು ಎಂದು ವಿವರಿಸಿದರು.
ಸುವರ್ಣಸೌಧದ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳಲ್ಲೂ ಅಗತ್ಯ ಬಂದೋಬಸ್ತ್ ಮಾಡಲಾಗುವುದು. ಇದಲ್ಲದೇ ಸಾರಿಗೆ ನಿರ್ವಹಣೆಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಅಧಿವೇಶನ ಬಂದೋಬಸ್ತಿಗೆ ಆಗಮಿಸುವ ಐದಾರು ಸಾವಿರ ಪೊಲೀಸ್ ಹಾಗೂ ಕೆ.ಎಸ್.ಆರ್.ಪಿ. ಸಿಬ್ಬಂದಿಗೆ ಅಗತ್ಯ ವಸತಿ ಮತ್ತು ಊಟೋಪಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಬೆಳಗಾವಿ ಉಪ ಪೊಲೀಸ್ ಆಯುಕ್ತ ರೋಹನ್ ಜಗದೀಶ್ ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತೆ ಶುಭಾ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಕಾಡಾ ಆಡಳಿತಾಧಿಕಾರಿ ಸತೀಶಕುಮಾರ್, ಲೊಕೋಪಯೋಗಿ ಇಲಾಖೆ ಅಭಿಯಂತರ ಸೊಬರದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						