ಬೆಂಗಳೂರು: ರಾಜ್ಯದ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಬೆಳಗಿನ ಜಾವ 2.30ಕ್ಕೆ ನಿಧನರಾಗಿದ್ದಾರೆ.
ಅವರಿಗೆ 92 ವರ್ಷ ವಯಸ್ಸಾಗಿತ್ತು. ಕೃಷ್ಣ ಅವರು ಪತ್ನಿ ಪ್ರೇಮಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಎಡೆಬಿಡದೇ ಅನಾರೋಗ್ಯ ಕಾಡಿತ್ತು. ಇತ್ತೀ ಚಿನವರೆಗೂ ಆರೋಗ್ಯ ಕಾಪಾಡಿಕೊಂಡಿದ್ದ ಅವರಿಗೆ 2 ವರ್ಷಗಳಲ್ಲಿ ಅನಾರೋಗ್ಯ ಕಾಡಿತ್ತು. ವರ್ಷದ ಹಿಂದೆ ಅನಾರೋಗ್ಯಗೊಂಡಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಆಗಸ್ಟ್ ತಿಂಗಳಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.
ಅಕ್ಟೋಬರ್‌ನಲ್ಲಿ ಅಸ್ವಸ್ಥರಾದಾಗ ಅವರನ್ನು ತೀವ್ರ ನಿಗಾಘಟಕದಲ್ಲಿ ಇರಿಸ ಲಾಗಿತ್ತು. ಗುಣಮುಖರಾಗಿ ಮನೆಗೆ ಬಂದಿದ್ದರು. ಆದರೆ ಮಂಗಳವಾರ ನಸುಕಿನ ಜಾವ 2.30 ರ ಸುಮಾರಿಗೆ ಮಲಗಿದಲ್ಲಿಯೇ ಹೃದಯಾಘಾತದಿಂದ ಅಸುನೀಗಿದರು.
ಕುಟುಂಬದವರಿಗೆ ಅನುಮಾನ ಬಂದು ಅವರು ಮಾತನಾಡಿ ಸಲು ಯತ್ನಿಸಿದರು. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಆಸ್ಪತ್ರೆಗೆ ದಾಖಲಿಸಬೇಕು ಅಂದುಕೊಂಡರಾದರೂ ತಮ್ಮ ವೈದ್ಯರಿಗೆ ಕರೆ ಮಾಡಿದರು. ಅವರು ಬಂದು ಪರೀಕ್ಷಿಸಿದಾಗ ಎಸ್.ಎಂ.ಕೃಷ್ಣ ಉಸಿರು ನಿಲ್ಲಿಸಿದ್ದರು.
ಇಂದು ಬೆಳಗ್ಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಂತಿಮ ಯಾತ್ರೆಯ ವಾಹನ ಬೆಂಗಳೂರಿನಿಂದ ಸೋಮನಹಳ್ಳಿಗೆ ವಿಶೇಷ ವಾಹನದ ಮೂಲಕ ಹೊರಟಿದೆ. ಪ್ರತಿಯೊಂದು ಮುಖ್ಯಸ್ಥಳಗಳಲ್ಲಿಯೂ ಸಹ ಅವರ ಅಭಿಮಾನಿಗಳು, ರಾಜಕೀಯ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.
ವಾಹನವು ಸದಾಶಿವನಗರದಿಂದ ಹೊರಟು ಚಾಲುಕ್ಯ ವೃತ್ಯ, ಟೌನ್ ಹಾಲ್ ಮಾರ್ಗವಾಗಿ ಮೈಸೂರು ರಸ್ತೆಗೆ ತಲುಪಿ, ಬಳಿಕ ಅಲ್ಲಿಂದ ಕೆಂಗೇರಿ, ಬಿಡದಿ, ರಾಮನಗರ ದ ಮೂಲಕ ಹಾದು ಚನ್ನಪಟ್ಟಣದಿಂದ ಮದ್ದೂರಿಗೆ ತಲುಪಲಿದೆ
ಮಾರ್ಗದುದ್ದಕ್ಕೂ ರಸ್ತೆಯ ಬದಿಯಲ್ಲಿ ಗುಂಪುಗೂಡಿ ನಿಂತಿರುವ ಸಾರ್ವಜನಿಕರು, ಅಭಿಮಾನಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಎಸ್‌ಎಂ ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಮದ್ದೂರಿನ ಸೋಮನಹಳ್ಳಿಯಲ್ಲಿ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಎಸ್.ಎಂ ಕೃಷ್ಣ ಅವರ ಅಂತಿಮ ದರ್ಶನಕ್ಕೆ ಸಹಸ್ರಾರು ಮಂದಿ ಆಗಮಿಸುತ್ತಿದ್ದು ಅವರೆಲ್ಲರ ಅನುಕೂಲಕ್ಕಾಗಿ ಯಥೋಚಿತ ವ್ಯವಸ್ಥೆ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾರ್ಗಾದ್ಯಂತ ಆಯೋಜಿಸಲಾಗಿದೆ. ರಾಜಕೀಯ ಗಣ್ಯರು, ಸಿನಿಮಾನಟರು, ಉದ್ಯಮಿಗಳೂ ಸೇರಿದಂತೆ ವಿವಿಧ ವಲಯಗಳ ಗಣ್ಯವ್ಯಕ್ತಿಗಳು ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನಕ್ಕೆ ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ.