ಸೊರಬ: ಮನೆಯ ಇ-ಖಾತೆ ಮಾಡಿಕೊಡಲು 5 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದ ಗ್ರಾಮಪಂಚಾಯಿತಿ ಪಿಡಿಒ (PDO) ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವ ಘಟನೆ ತಾಲೂಕು ಇಂಡುವಳ್ಳಿಯಲ್ಲಿ ನಡೆದಿದೆ.
ಮಹಮ್ಮದ್ ಗೌಸ್ ಎಂಬುವರು ಇಂಡುವಳ್ಳಿಯಲ್ಲಿ ಜಮೀನು ಹೊಂದಿದ್ದು, ಇದರಲ್ಲಿ ಒಂದು ಮನೆ ಹೊಂದಿದ್ದು, ಇ-ಖಾತೆ ಮಾಡಿಕೊಡಲು ಇಂಡುವಳ್ಳಿ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಪಿಡಿಒ ಈಶ್ವರಪ್ಪ ಅವರು ಮಹಮ್ಮದ್ ಗೌಸ್ ಅವರ ಮನೆ ಬಳಿ ಬಂದು ಅಳತೆ ಮಾಡಿಕೊಂಡಿದ್ದರು. ಇದಾದ ನಂತರ ಹಲವು ಬಾರಿ ಪಿಡಿಒ ಈಶ್ವರಪ್ಪ ಅವರ ಬಳಿ ಬಂದು ಕೇಳಿದಾಗ ಅವರು ಇ-ಖಾತೆ ನೀಡದೆ ಸತಾಯಿಸಿದ್ದರಂತೆ.
ಈ ಕುರಿತು ಪಿಡಿಒ ಈಶ್ವರಪ್ಪ ಅವರ ಬಳಿ ಕೇಳಲು ಬಂದಾಗ ಅವರು 5 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪಿ ಬಂದ ಗೌಸ್, ಲೋಕಾಯುಕ್ತ ಅಧಿಕಾರಿಗಳ ಬಳಿ ತೆರಳಿ ಈ ಕುರಿತು ದೂರು ನೀಡಿದ್ದರು.
ಇಂದು ಸೊರಬ ನಗರದ ಪೋಸ್ಟ್ ಆಫೀಸ್ ಬಳಿ ಪಿಡಿಒ ಈಶ್ವರಪ್ಪ ಅವರು ಗೌಸ್ ಕಡೆಯಿಂದ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಈ ಕುರಿತು ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಸುರೇಶ್ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆಂದು ವರದಿಯಾಗಿದೆ.