
ಬೆಂಗಳೂರು: ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಅಪಾರ ನಷ್ಟವಾಗಿದ್ದು, ನಾಮ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ಪಳಗಿದವರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R Ashoka) ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆರ್ಥಿಕ ನಷ್ಟದಲ್ಲಿದೆ. ಬಸವರಾಜ ರಾಯರೆಡ್ಡಿ ಅವರು ಹಲವು ಬಾರಿ ಹೇಳಿದರೂ ಸಿಎಂ ಸಿದ್ದರಾಮಯ್ಯ ಕೇಳಿಲ್ಲ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು ನಷ್ಟ ಉಂಟಾಗಿದೆ. ಸಾರಿಗೆ ನೌಕರರು ಧರಣಿ ಮಾಡುತ್ತಿದ್ದು, ಅವರಿಗೆ 4 ಸಾವಿರ ಕೋಟಿ ರೂ. ನೀಡಬೇಕು. ರೈತರಿಗೆ ಒಂದೂವರೆ ಸಾವಿರ ಕೋಟಿ ಸಬ್ಸಿಡಿ ನಾಮ ಹಾಕಿದ್ದಾರೆ ಎಂದರು.
ನಾಮ ಹಾಕುವುದರಲ್ಲಿ ಕಾಂಗ್ರೆಸ್ ನವರು ಪಳಗಿದವರು. ಹಾಗಾಗಿ ಈ ವರ್ಷ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮುಂದಿನ ವರ್ಷ ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿ 2 ಲಕ್ಷ ಕೋಟಿ ರೂ. ಸಾಲ ಮಾಡಿದರೆ ಕರ್ನಾಟಕ ಜನ್ಮದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ದೂರಿದರು.
ರಸ್ತೆಗೆ ಹೆಸರು ಸರಿಯಲ್ಲ
ಕರ್ನಾಟಕಕ್ಕೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನೀಡಿದ ಮನೆತನದವರ ಹೆಸರನ್ನು ತೆಗೆದು ಕೆ.ಆರ್.ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹಾಗೇನಾದರೂ ಹೆಸರು ಇಡಬೇಕು ಎಂದಿದ್ದರೆ ಹೊಸ ರಸ್ತೆಯೊಂದನ್ನು ನಿರ್ಮಿಸಿ ಅವರ ಹೆಸರು ಅಥವಾ ಅವರ ಕುಟುಂಬದವರ ಹೆಸರನ್ನು ಇಡಲಿ.
ಮಹಾರಾಜರ ಕುಟುಂಬ ಈ ನಾಡಿಗೆ ಸೇವೆ ಸಲ್ಲಿಸಿದೆ, ಅನ್ನ-ನೀರು ಕೊಟ್ಟಿದೆ. ಮಾರಿ ಕಣ್ಣು ಹೋರಿ ಮೇಲೆ ಎನ್ನುವಂತೆ ಆ ಕುಟುಂಬವನ್ನು ಗುರಿ ಮಾಡಬಾರದು. ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಅವರು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆಂದರೆ ಜನರಿಗೆ ಅವರ ಬಗ್ಗೆ ಇರುವ ಭಾವನೆ ಬದಲಾಗುತ್ತದೆ ಎಂದರು.
ಸರ್ಕಾರ ಹುಚ್ಚರ ಸಂತೆಯಾಗಿದೆ. ಸಿ.ಟಿ.ರವಿ ಮೇಲೆ ಸುಮಾರು ನಲ್ವತ್ತು- ಐವತ್ತು ಜನ ಹಲ್ಲೆ ಮಾಡಿ ಕೊಲೆ ಯತ್ನ ನಡೆದಿದೆ. ಇದರಲ್ಲಿ ಸಚಿವರು ಮತ್ತು ಅವರ ಪಿಎ ಪಾತ್ರ ಇದೆ. ಈ ಪ್ರಕರಣದಲ್ಲಿ ಅದೇ ಠಾಣೆಯಲ್ಲಿ ಎಫ್ಐಆರ್ ಮಾಡಬೇಕೆಂದು ಆಗ್ರಹಿಸಿದ್ದೆವು. ನಮ್ಮನ್ನು ಖಾನಾಪುರ ಪೊಲೀಸ್ ಠಾಣೆಯಲ್ಲಿ ಸುಮಾರು ಐದು ಗಂಟೆಗಳ ಕಾಲ ಕಾಯಿಸಿ, ನಂತರ ದೂರು ಸ್ವೀಕರಿಸಿದ್ದಾರೆ.
ಈ ಸರ್ಕಾರಕ್ಕೆ ಬುದ್ಧಿ ಭ್ರಮಣೆಯಾಗಿದೆ. ಪೊಲೀಸ್ ಠಾಣೆಗಳು ಸುರಕ್ಷಿತ ಅಲ್ಲ. ಯಾರಾದರೂ ಅಪರಾಧಿಯನ್ನು ಬಂಧಿಸಿದರೆ ಅವರನ್ನು ಕಬ್ಬಿನಗದ್ದೆಯಲ್ಲಿ ಇರಿಸಬೇಕು ಎಂದು ರೂಲ್ಸ್ ಮಾಡಿದ್ದಾರೆ. ಗೃಹ ಸಚಿವರನ್ನು ಏನೂ ಕೇಳಿದರೂ ನನಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ದೂರಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						