ದೊಡ್ಡಬಳ್ಳಾಪುರ (Doddaballapura 2024); ನಗರದಲ್ಲಿ ಹಾಗೂ ಗ್ರಾಮಾಂತರದಲ್ಲಿ ರಸ್ತೆ ದುರವಸ್ಥೆಗಳು, ತಾಲೂಕಿನ ಅಭಿವೃದ್ದಿ ವಿಚಾರದಲ್ಲಿ ಆರೋಪ ಪ್ರತ್ಯಾರೋಪ. ಪ್ರಮುಖರ ನಿಧನೆ, ಸ್ಥಾಪನೆಯಾಗದ ಜಿಲ್ಲಾಸ್ಪತ್ರೆ, ವಿಸ್ತರಣೆಯಾಗದ ರಸ್ತೆಗಳು, ಕಳೆದ ವರ್ಷಕ್ಕಿಂತಲೂ ತೀವ್ರವಾದ ರಸ್ತೆ ಅಪಘಾತಗಳು, ಕಳ್ಳತನ ಹಾಗೂ ಅಪರಾಧ ಕೃತ್ಯಗಳು, ವ್ಯಾಪಾರ ಏರುಪೇರುಗಳಿಂದಾಗಿ ನೇಕಾರರ ಸಂಕಷ್ಟ.
ತಾಲೂಕಿನಲ್ಲಿ ನಿರಂತರ ಕಾಡಿದ ಚಿರತೆಗಳ ಕಾಟ, ನಿಲ್ಲದ ಬಿಬಿಎಂಪಿ ಕಸ ಕಂಟಕ, ಲೋಕ ಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಜೆಡಿಎಸ್‌ಗಳ ಬಲವಾದ ಮೈತ್ರಿ, ಈ ವರ್ಷವೂ ಉದ್ಘಾಟನೆಯಾಗದ ಇಎಸ್‌ಐ ಆಸ್ಪತ್ರೆ ಪ್ರಮುಖ ಅಂಶಗಳಾಗಿವೆ.
ಹೋರಾಟ
ತಾಲೂಕಿನ ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಮೋಪರಹಳ್ಳಿ ಗ್ರಾಮಗಳಲ್ಲಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗೆ 2013ರ ಕಾಯ್ದೆಯಂತೆ ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಬೇಕು. ಇಲ್ಲವಾದರೆ ಭೂಸ್ವಾಧೀನ ಕೈಬಿಡಬೇಕು ಎಂದು ಆಗ್ರಹಿಸಿ ಭೂಸ್ವಾಧೀನ ಹೋರಾಟ ಸಮಿತಿ ನಿರಂತರ ಪ್ರತಿಭಟನೆ ಕೈಗೊಂಡಿದ್ದರು. ಜೆಡಿಎಸ್ ಮುಖಂಡ ಹರೀಶ್ ಗೌಡ ನೇತೃತ್ವದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು
ದೊಡ್ಡಬಳ್ಳಾಪುರ ತಾಲೂಕಿನ ಖಾನೆ ಹೊಸಹಳ್ಳಿ , ಬೈರಸಂದ್ರದ ಪಾಳ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಪಿಟಿಸಿಎಲ್‌ನಿಂದ ಉನ್ನತೀಕರಿಸಿದ ಹೈಟೆನ್‌ಷನ್ ವಿದ್ಯುತ್ ಲೈನ್ ಅಳವಡಿಕೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿದ್ದರು.
ಕಾಡಿದ ಚಿರತೆಗಳು
ತಾಲೂಕಿನ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ-ಕಲ್ಲುಕೋಟೆ, ಘಾಟಿ ಕ್ಷೇತ್ರದ ಗೋಶಾಲೆ ಸುತ್ತ ಮುತ್ತ, ಕೊನಘಟ್ಟ ಮೊದಲಾದ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು.
ದೊಡ್ಡರಾಯಪನಹಳ್ಳಿ ವ್ಯಾಪ್ತಿಯ ಗ್ರಾಮದಲ್ಲಿ ದಾಳಿ ಮಾಡಿ ಹಸುವನ್ನು ಬಲಿ ಪಡೆದಿತ್ತು. ತಾಲೂಕಿನ ಮೆಳೇಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚನ್ನಾಪುರ ಗ್ರಾಮದಲ್ಲಿ ಚಿರತೆಯೊಂದು ದಾಳಿ ಮಾಡಿ ಎರಡು ಹಸುಗಳನ್ನು ಬಲಿ ಪಡೆದಿತ್ತು.
ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳೆ ಹೆಚ್ಚಾಗುತ್ತಿದೆ. ಈ ನಡುವೆ ತಾಲೂಕಿನ ಸಾಸಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಸೂಲುಕುಂಟೆ ಗ್ರಾಮದಲ್ಲಿ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ನಂತರ ಆರೂಢಿ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಚಿರತ ಕಂಡುಬಂದು ಆತಂಕ ಸೃಷ್ಟಿಸಿತು.
ಕೆರೆ ನೀರು ಮಾಲಿನ್ಯ
ನಗರಸಭೆ ವ್ಯಾಪ್ತಿಯ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಒಳಚರಂಡಿ ನೀರು ಹಾಗೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳ ತ್ಯಾಜ್ಯ ನೀರು ಚಿಕ್ಕತುಮಕೂರು, ದೊಡ್ಡತುಮಕೂರು ಕೆರೆಗಳಿಗೆ ಸೇರಿ ಅಂತರ್ಜಲ ಕಲುಷಿತವಾಗುತ್ತಿರುವ ಕುರಿತು ಈ ವರ್ಷವೂ ಪ್ರತಿಭಟನೆಗಳು ನಡೆದಿದ್ದು, ಮಾಲಿನ್ಯ ನಿಯಂತ್ರಣ ಮಂಡಲಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾಕಾರಿಗಳ ಕಚೇರಿ ಮುಂದೆ ಉರುಳು ಸೇವೆ ಮಾಡಲಾಗಿತ್ತು.
ಡಾ.ಕೆ.ಸುಧಾಕರ್ ಗೆಲುವಿಗೆ ಕೊಡುಗೆ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದು ಶೇ.80.11 ಮತದಾನವಾಗಿತ್ತು.

ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆ ಹೆಚ್ಚಿನ ಮತಗಳು ಲಭಿಸಿ, ಬಿಜೆಪಿ ಜೆಡಿಎಸ್ ಮೈತ್ರಿಗೆ ಭದ್ರ ಬುನಾದಿಯಾಗಿತ್ತು.
ದೊಡ್ಡಬಳ್ಳಾಪುರ ಅಭಿವೃದ್ಧಿ ಕುರಿತು ಆರೋಪ- ಪ್ರತ್ಯಾರೋಪ
ತಾಲೂಕಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಆರೋಪ ಪ್ರತ್ಯಾರೋಪ ನಡೆಸುತ್ತಿದ್ದಾರೆ.
ಧೀರಜ್ ಮುನಿರಾಜು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸರಿಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೆ, ಅವರ ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯವಾಗಿವೆ. ಈ ಹಿಂದೆ ಟಿ.ವೆಂಕಟರಮಣಯ್ಯ ಶಾಸಕರಾಗಿದ್ದ ಮಂಜೂರಾಗಿದ್ದ ಕಾಮಗಾರಿಗಳು, ಕೇಂದ್ರ ಸರ್ಕಾರದ ಯೋಜನೆಗಳ ಹೆಸರನ್ನೇಳಿ ಅಭಿವೃದ್ದಿ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದ್ದಾರೆ.
ಇದಕ್ಕೆ ತಿರುಗೇಟು ನೀಡುವ ಶಾಸಕ ಧೀರಜ್ ಮುನಿರಾಜು ಬೆಂಬಲಿಗರು, ರಾಜ್ಯ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿಲ್ಲ. ಗ್ಯಾರಂಟಿಗಳಿಂದಾಗಿ ಇಡೀ ರಾಜ್ಯವೇ ಅಭಿವೃದ್ಧಿ ಕಾಣುತ್ತಿಲ್ಲ ಎನ್ನುತ್ತಾರೆ.
ಬೆಚ್ಚಿ ಬಿದ್ದ ಜನ
ತಾಲೂಕಿನ ಬಾಶೆಟ್ಟಿಹಳ್ಳಿಯ ಜೆ.ಪಿ.ಪ್ಯಾಲೇಸ್ ಸಮೀಪ ನಡೆದ ಗ್ಯಾಂಗ್ ವಾರ್‌ನಲ್ಲಿ ಯುವಕನೊಬ್ಬನನ್ನು ಲಾಂಗುಗಳಿಂದ ಹೊಡೆದು ಹತ್ಯೆ ಮಾಡಿರುವ ಪ್ರಕರಣ, ಇದೇ ಬಾಶೆಟ್ಟಿಹಳ್ಳಿ ಪ್ರದೇಶದಲ್ಲಿ ರಿಯಲ್ ಎಷ್ಟೇಟ್ ಉದ್ಯಮಿಯನ್ನು ಹತ್ಯೆ ಮಾಡಿ ಸುಟ್ಟ ಹಾಕಿರುವ ಪ್ರಕರಣಗಳು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದವು.
ಮಿತಿಮೀರಿದ ಅಪಘಾತ
ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ ದೊಡ್ಡಬೆಳವಂಗಲ, ಸಾಸಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಈ ವರ್ಷ ಮಿತಿ ಮೀರಿ ಸಂಭವಿಸಿದೆ.

ಅಂದಾಜು ಮಾಹಿತಿ ಅನ್ವಯ ಈ ವರ್ಷ 90 ಕ್ಕೂ ಹೆಚ್ಚು ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 100ಕ್ಕೂ ಹೆಚ್ಚು ಸಾವುಗಳು ಹೊಸಹಳ್ಳಿ ಹೊರತುಪಡಿಸಿ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ವಾರದಲ್ಲಿ ಕನಿಷ್ಠ ಐದಾರು ಅಪಘಾತಗಳು ವರದಿಯಾಗಿ, ಸಾವುನೋವುಗಳ ಸಂಖ್ಯೆ ತಾಲೂಕಿನ ಜನರನ್ನು ನಿದ್ದೆಗೆಡಿಸಿತು.
ನಗರದ ಹೊರವಲಯದಲ್ಲಿರುವ ಸಿದ್ದೇನಾಯಕನಹಳ್ಳಿ ಬಳಿ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಈ ಬಗ್ಗೆ ಟೋಲ್ ಸಿಬ್ಬಂದಿ ಕಾಳಜಿ ವಹಿಸಬೇಕಿದೆ ಎಂದು ದೂರುಗಳ ಬಂದ ಹಿನ್ನಲೆಯಲ್ಲಿ ಮಾರಸಂದ್ರ ಟೋಲ್ ಸಿಬ್ಬಂದಿ ಸಿದ್ದೇನಾಯಕನಹಳ್ಳಿ ರಸ್ತೆ ಬಳಿ ಬಂದು ಸ್ಥಳ ಪರಿಶೀಲನೆ ನಡೆಸಿ, ರಿಪ್ಲಕ್ಟರ್‌ಗಳನ್ನು ಅಳವಡಿಸಲಾಗಿತ್ತು.
ಭರವಸೆಗೆ ಸೀಮಿತವಾದ ಜಿಲ್ಲಾಸ್ಪತ್ರೆ
ನಗರದ ತಾಯಿ ಮಗು ಸ್ಪತ್ರೆಯಲ್ಲಿ ಅಜಾಕ್ಸ್ ಹೊರರೋಗಿಗಳ ವಿಭಾಗದ ಉದ್ಘಾಟನೆ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ನಿರ್ಮಿಸುವ ಭರವಸೆ ಈ ಸರ್ಕಾರದಲ್ಲಿಯೂ ಮುಂದುವರಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿಯ ಗರಿ
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ನಾರಾಯಣಸ್ವಾಮಿ ಅವರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಹಾಗೂ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಂಗಳ ಕುಮಾರಿ ಎಂ.ಹೆಚ್ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಅಗಲಿದ ಗಣ್ಯರು

ತಾಲೂಕಿನ ಹಿರಿಯ ರಾಜಕಾರಣಿ, ಜಿ.ಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣ ಗೌಡ (86 ವರ್ಷ), ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ.ಅಪ್ಪಯ್ಯಣ್ಣ(82 ವರ್ಷ), ಮಾಜಿ ಶಾಸಕ ಜೆ.ನರಸಿಂಹಸ್ವಾಮಿ (78 ವರ್ಷ) ಅಗಲಿದ ಗಣ್ಯರಲ್ಲಿ ಪ್ರಮುಖರಾಗಿದ್ದಾರೆ.
ಕೃಷ್ಣಾಬೈರೇಗೌಡ ಕಿಡಿ

ಕಂದಾಯ ಸಚಿವ ಕೃಷ್ಣಬೈರೇಗೌಡ ಬೆಳಿಗ್ಗೆ 10.20ರ ಸುಮಾರಿಗೆ ತಾಲ್ಲೂಕು ಕಚೇರಿ, ಉಪವಿಗಾಧಿಕಾರಿಗಳ ಹಾಗೂ ನೋಂದಣಿ ಅಧಿಕಾರಿಗಳ ಕಚೇರಿಗೆ ದಿಢೀರ್ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಹೊರತು ಯಾರೊಬ್ಬರ ಸರ್ಕಾರಿ ಅಧಿಕಾರಿಗಳು ಇಲ್ಲದೆ ಇರುವುದು ಕಂಡು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಲಸಕ್ಕೆ ಎಷ್ಟು ಅಂತ ಬೋರ್ಡ್ ಹಾಕಿಬಿಡಿ, ಅಟ್ಲೀಸ್ಟ್ ಫೀಕ್ಸ್ ಮಾಡಿಬಿಡಿ, ಓಗ್ಲಿ ಅದ್ ಆದ್ರೂ ಮಾಡಿ ಬಿಡಿ, ಚೌಕಾಸಿ ಮಾಡೋದು ತಪ್ಪುತ್ತೆ.
ಅಧಿಕೃತ ಮಾಡಿಬಿಡಿ ಎಲ್ಲವನ್ನು, ಇಷ್ಟು ಪರ್ಸಂಟೇಜ್ ಕೊಡದಿದ್ದರೆ ಕೆಲಸ ಆಗಲ್ಲ.. ಇಷ್ಟು ಪರ್ಸಂಟೇಜ್ ಮಂತ್ರಿಗೆ ಹೋಗುತ್ತೆ.. ಅದನ್ನು ಹಾಕಿಬಿಡಿ ಪರ್ವಾಗಿಲ್ಲ ಎಂದು ಎರಡು ಕೈಜೋಡಿಸಿ ಕೈ ಮುಗಿದು ಬಿಟ್ಟರು.
ಸ್ಥಳಕ್ಕೆ ಓಡೋಡಿ ಬಂದ ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ, ಸರ್ವೇ ಇಲಾಖೆ, ಕಂದಾಯ ಇಲಾಖೆಯ ಬಹುತೇಕ ಜನ ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದೇ ಹಾಗೂ ಇತರೆ ಕೆಲಸಗಳ ಮೇಲೆ ಹೊರಗೆ ಹೋಗಿರುವ ಬಗ್ಗೆ ಹಾಜರಾತಿ ಪುಸ್ತಕದಲ್ಲಿ ನಮೋದಿಸದೆ ಇರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ರೈತರೊಂದಿಗೆ ಅಧಿಕಾರಿಗಳ ನಡವಳಿಕೆ ಸೇರಿದಂತೆ ಹಲವಾರು ದೂರುಗಳನ್ನು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು.