
ದೊಡ್ಡಬಳ್ಳಾಪುರ (Doddaballapura): ಇತ್ತೀಚೆಗೆ ನಿಧನರಾದ ತಾಲ್ಲೂಕು ಜೆಡಿಎಸ್ ಹಿರಿಯ ಮುಖಂಡರಾದ ಹಾಡೋನಹಳ್ಳಿ ಅಪ್ಪಯ್ಯಣ್ಣನವರ ನಿವಾಸಕ್ಕೆ ಇಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಟಿಬಿ ವೃತ್ತಕ್ಕೆ ಬಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು.
ಬಳಿಕ ಹಾಡೋನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಅಪ್ಪಯ್ಯಣ್ಣ ಅವರ ಸಮಾಧಿ ಬಳಿಗೆ ತೆರಳಿ, ಪುಷ್ಪ ಹಾರ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಅಪ್ಪಯ್ಯಣ್ಣ ಅವರ ಮನೆಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, ಕುಟುಂಬಕ್ಕೆ ಸಾಂತ್ವಾನ ಹೇಳಿದರು, ಅಪ್ಪಯ್ಯಣ್ಣ ಅಗಲಿಕೆ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕಿಗೆ ತುಂಬಲಾರದ ನಷ್ಟ, ಬೇರು ಮಟ್ಟದಲ್ಲಿ ನಮ್ಮ ಪಕ್ಷ ಸಂಘಟನೆಯಲ್ಲಿ ಅಪ್ಪಯ್ಯಣ್ಣ ಪಾತ್ರ ಅಪಾರವಾಗಿತ್ತು.
ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಅಪ್ಪಯ್ಯಣ್ಣನವರು ಬೆಂಗಳೂರು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಬಮುಲ್ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಹೀಗೆ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಉಳಿಸಿಕೊಂಡಿದ್ದರು.
ಅಪ್ಪಯ್ಯಣ್ಣ ಅಗಲಿಕೆ ಜೆಡಿಎಸ್ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ದೇವೇಗೌಡರ ಕುಟುಂಬ ಅಪ್ಪಯ್ಯಣ್ಣ ಕುಟುಂಬದ ಬೆಂಬಲವಾಗಿ ಸದಾ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ದೇವರಾಜಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿಜಯಕುಮಾರ್, ಹರೀಶ್ ಗೌಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ನಗರಸಭೆ ಉಪಾಧ್ಯಕ್ಷ ಮಲ್ಲೇಶ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ಸುನೀಲ್ ಕುಮಾರ್, ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮುಖಂಡರಾದ ಅರಳುಮಲ್ಲಿಗೆ ಶ್ರೀನಿವಾಸ್, ಕುರುವರಗೆರೆ ಮುರುಳಿ, ದೇವರಾಜ್, ನಾಗರಾಜ್, ಗೌರೀಶ್, ಅಶ್ವಥ್ ನಾರಾಯಣ್, ಆರೂಢಿ ಹರೀಶ್, ಮುದ್ದಣ್ಣ, ಶಾಂತಿನಗರ ಪ್ರವೀಣ್, ಸುಣ್ಣಗಟ್ಟಹಳ್ಳಿ ಮಂಜುನಾಥ್, ಹಾಡೋನಹಳ್ಳಿ ಮುನೇಗೌಡ, ನಾರಾಯಣಪ್ಪ ಮತ್ತಿತರರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						