
ದೊಡ್ಡಬಳ್ಳಾಪುರ (Doddaballapura): ಇತ್ತೀಚಿಗೆ ನಿಧನರಾದ ಜೆಡಿಎಸ್ ಹಿರಿಯ ಮುಖಂಡ ಹೆಚ್.ಅಪ್ಪಯ್ಯಣ್ಣ ಅವರ ನುಡಿ ನಮನ ಕಾರ್ಯಕ್ರಮ ಇಂದು (ಜ.11) ನಡೆಯಲಿದೆ ಎಂದು ತೆಂಗುನಾರು ಮಂಡಳಿ ಅಧ್ಯಕ್ಷ ಗಂಟಿಗಾನಹಳ್ಳಿ ಬಾಬು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಅಪ್ಪಯ್ಯಣ್ಣನವರು ಬೆಂಗಳೂರು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಬಮುಲ್ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಹೀಗೆ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಉಳಿಸಿಕೊಂಡಿದ್ದರು.
ಅವರ ಅಕಾಲಿಕ ಅಗಲಿಕೆ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕಿಗೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಅವರ ಸೇವಾ ಕಾರ್ಯವನ್ನು ಸ್ಮರಿಸಲು ಇಂದು ಬೆಳಗ್ಗೆ 11ಗಂಟೆ ಹಾಡೋನಹಳ್ಳಿ ಗ್ರಾಮದ ರಂಗಮಂದಿರದಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಜಿ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಆದಿಚುಂಚನಗಿರಿ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾಂದ ಸ್ವಾಮೀಜಿ ಸೇರಿದಂತೆ ಹಾಲಿ, ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಬೆಂಗಳೂರು ಹಾಲು ಒಕ್ಕೂಟ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						