ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ನಿಮಿತ್ತ ದೇಶಾದ್ಯಂತ ಬಿಜೆಪಿ ವತಿಯಿಂದ ವಾಜಪೇಯಿ ಅವರ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು, ಅವರ ಜೊತೆ ಒಡನಾಟ, ನಮ್ಮ ರಾಜ್ಯಕ್ಕೆ ಬಂದಾಗ ವೇದಿಕೆ ಹಂಚಿಕೊಂಡವರು, ಪ್ರವಾಸ ಮಾಡಿದ ಹಿರಿಯರ ಭೇಟಿ ಮಾಡಿ ಅವರ ಅನುಭವವನ್ನು ತಿಳಿದುಕೊಳ್ಳುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ತಿಳಿಸಿದರು.
ಅಟಲ್‍ಜೀ ಅವರ ಜೊತೆ ಕೆಲಸ ನಿರ್ವಹಿಸಿರುವ ಹಾಗೂ ಹಿರಿಯ ಕಾರ್ಯಕರ್ತರಾದ ಸರೋಜಿನಿ ಮುತ್ತಣ್ಣ ರವರ ನಿವಾಸಕ್ಕೆ ವಿಜಯೇಂದ್ರ ಮತ್ತು ಮುಖಂಡರು ಭೇಟಿ ನೀಡಿದರಲ್ಲದೆ, ಅಲ್ಲಿ ಅಟಲ್‍ಜೀ ಅವರ ಒಡನಾಟ ಸಂಬಂಧಿತ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ವಿಜಯೇಂದ್ರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಇವತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯರು, ಪ್ರಸಿದ್ಧ ವಕೀಲರೂ ಆದ ಸರೋಜಿನಿ ಮುತ್ತಣ್ಣ ರವರ ಮನೆಗೆ ಭೇಟಿ ಕೊಟ್ಟಿದ್ದೇವೆ. ರಾಷ್ಟ್ರೀಯ ಮಹಿಳಾ ಮೋರ್ಚಾದಲ್ಲಿ ಅವರು ಸೇವೆ ಸಲ್ಲಿಸಿದ್ದರು ಎಂದು ವಿವರಿಸಿದರು.
ನಾಳೆ ಸುದೀರ್ಘ ಪತ್ರಿಕಾಗೋಷ್ಠಿ ಕರೆಯಲಿದ್ದೇನೆ. ರಾಜ್ಯದ ಗ್ಯಾರಂಟಿ ಕುರಿತ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟಿನ ಕುರಿತು ನಾಳೆ ಮಾತನಾಡುವೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಭೆ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಅವರು ಹಿರಿಯರಿದ್ದಾರೆ. ಸಭೆ ಕರೆದು ಪಕ್ಷವನ್ನು ಹೇಗೆ ಬಲಪಡಿಸಬೇಕೆಂಬ ಚರ್ಚೆ ಮಾಡುವುದಕ್ಕೆ ಯಾರು ಬೇಡ ಎನ್ನುತ್ತಾರೆ ಎಂದು ಪ್ರಶ್ನಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ.ರಾಮಮೂರ್ತಿ, ಶಾಸಕ ಉದಯ ಗರುಡಾಚಾರ್, ಅಟಲ್ ಜನ್ಮ ಶತಮಾನೋತ್ಸವ ಅಭಿಯಾನದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ, ರಾಜ್ಯ ಸಮಿತಿ ಸದಸ್ಯ ಸದಾಶಿವ್ ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.