ದೊಡ್ಡಬಳ್ಳಾಪುರ (Doddaballapura); ಸಾಕು ಪ್ರಾಣಿಗಳು ಸೇರಿದಂತೆ ವಿವಿಧ ಪ್ರಾಣಿಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇವುಗಳ ಆರೋಗ್ಯ ಸಹ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಣಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಶು ಆಸ್ಪತ್ರೆಗಳಿಗೆ ಸರ್ಕಾರದೊಂದಿಗೆ ಸಮುದಾಯ ಹಾಗೂ ಕಂಪನಿಗಳ (CSR ಅನುದಾನ) ನೆರವು ಅಗತ್ಯವಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿ ಉಪನಿರ್ದೇಶಕರಾದ ಡಾ.ಎನ್.ಜಗದೀಶ್ ಕುಮಾರ್ ತಿಳಿಸಿದ್ದಾರೆ.

ನಗರದ ಬಸ್ ನಿಲ್ದಾಣದ ಬಳಿಯಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಹಿಟಾಚಿ ಆಸ್ತೆಮೊ ಫೈ ಪ್ರೈವೇಟ್ ಲಿ., ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಯಡಿ ಕೊಠಡಿಗಳ ನವೀಕರಣ, ಸಣ್ಣ ಪ್ರಾಣಿಗಳ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಪರಿಕರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಹಕ್ಕಿ ಜ್ವರದ ಬಗ್ಗೆ ಎಲ್ಲೆಡೆ ಸದ್ದು ಕೇಳಿ ಬರುತ್ತಿದೆ. ಇದರಿಂದ ಮನುಷ್ಯರಿಗೆ ಹಾನಿ ಇಲ್ಲವಾದರೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ರಾಸುಗಳಿಗೆ ಬರುವ ಕಾಲುಬಾಯಿ, ಕೆಚ್ಚಲು ನಾವು ಮೊದಲಾದ ರೋಗಗಳಿಗೆ ಲಸಿಕೆ ಹಾಕಿಸಬೇಕಿದೆ.
ಇಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಹಲವಾರು ಪರಿಕರಗಳು ದೊರೆತಿರುವುದರಿಂದ ಸಣ್ಣ ಪ್ರಾಣಿಗಳಿಗೂ ಶಸ್ತ್ರಚಿಕಿತ್ಸೆ ಮಾಡಲು ಅನುಕೂಲವಾಗುತ್ತದೆ. ನಗರಸಭೆಯಿಂದ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಸಹ ನೆರವಾಗುತ್ತದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಿಎಸ್ಆರ್ (CSR) ಅನುದಾನದಡಿ ಪಶು ಆಸ್ಪತ್ರೆಗಳಿಗೆ ಹೆಚ್ಚಿನ ನೆರವು ನೀಡಿದರೆ ಸಾಕು ಪ್ರಾಣಿಗಳ ಮಾಲೀಕರಿಗೆ ಹಾಗೂ ರೈತರಿಗೂ ಅನುಕೂಲವಾಗುತ್ತದೆ ಎಂದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಹಿಟಾಚಿ ಆಸ್ತೆಮೊ ಫೈ ಪ್ರೈವೇಟ್ ಲಿ., ಘಟಕದ ಮುಖ್ಯಸ್ಥ ವಿನಾಯಕ ಹೆಗ್ಗಡೆ ಮಾತನಾಡಿ, ಮನುಷ್ಯರಂತೆ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಪ್ರಾಣಿಗಳ ಆರೋಗ್ಯಕ್ಕೂ ಸಹ ನಾವು ಪ್ರಾಧಾನ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕಂಪನಿಯಿಂದ ಪಶು ಆಸ್ಪತ್ರೆಗೆ ನೆರವು ನೀಡಲಾಗಿದೆ ಎಂದರು.
ಕಂಪನಿಯ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಿದ ಆಸ್ಪತ್ರೆಯ ಮುಖ್ಯ ಪಶು ವೈದ್ಯಾಕಾರಿ ಡಾ.ವಿಶ್ವನಾಥ್ ಮಾತನಾಡಿ, ಹಿಟಾಚಿ ಆಸ್ತೆಮೊ ಫೈ ಪ್ರೈವೇಟ್ ಲಿ., ಸಾಮಾಜಿಕ ಹೊಣೆಗಾರಿಕೆ ನಿಯಡಿ ತಾಲ್ಲೂಕಿನ ಸರ್ಕಾರಿ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.
ಕಂಪನಿಯವರು ಜಾನುವಾರುಗಳ ಅನುಕೂಲಕ್ಕಾಗಿ ನಗರದ ಪಶುಆಸ್ಪತ್ರೆಯ ಆವರಣದಲ್ಲಿ ಶೀಟುಗಳನ್ನು ಅಳವಡಿಸಿ ನೆರಳಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಪ್ರಯೋಗಾಲಯದ ಕೊಠಡಿ, ಮಹಿಳಾ ವಿಶ್ರಾಂತಿ ಕೊಠಡಿಯನ್ನು ನವೀಕರಣಗೊಳಿಸಿ ಅವಶ್ಯವಿರುವ ಪೀಠೋಪಕರಣಗಳನ್ನು ಮತ್ತು ಸಣ್ಣ ಪ್ರಾಣಿಗಳ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಗುಣಮಟ್ಟದ ಶಸ್ತ್ರಚಿಕಿತ್ಸಾ ಹೈಡೋಲಿಕ್ ಟೇಬಲ, ನೆರಳು ರಹಿತ ದೀಪಗಳನ್ನು ಉಪಯೋಗಿಸಲು ನೀಡಿರುತ್ತಾರೆ ಎಂದರು.
ಈ ವೇಳೆ ಹಿಟಾಚಿ ಆಸ್ತೆಮೊ ಫೈ ಪ್ರೈವೇಟ್ ಲಿ., ಮಾನವ ಸಂಪನ್ಮೂಲ ವಿಭಾಗದ ರಾಘವೇಂದ್ರ ಪ್ರಸಾದ್, ವಿಭಾಗ ವ್ಯವಸ್ಥಾಪಕ ಸಲೀಂ, ವ್ಯವಸ್ಥಾಪಕರಾದ ಎಂ.ರಾಘವೇಂದ್ರ, ಜಿ.ಮನೋಹರ್, ಎಂಜಿನಿಯರ್ ಅಜಿತ್ ಹಾಜರಿದ್ದರು.