ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಸಂಚರಿಸುವ KSRTC ಬಸ್ಸುಗಳ ದುಸ್ಥಿತಿಯನ್ನು ಹೇಳುವವರು ಕೇಳುವವರು ಯಾರಾದ್ರೂ ಇದ್ದಾರೆಯೇ ಎಂಬ ಪ್ರಶ್ನೆ ತಾಲೂಕಿನ ಜನರನ್ನು ಕಾಡುತ್ತಿದೆ.
ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರದೆ ವಿದ್ಯಾರ್ಥಿಗಳು, ಉದ್ಯೋಗಿಗಳು ಪ್ರತಿ ನಿತ್ಯ ಪರದಾಡಬೇಕಿರುವುದು ಸರ್ವೆ ಸಾಮಾನ್ಯ ವಿಷಯವಾಗಿದ್ದು, ಚುನಾವಣೆ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ದನಿ ಎತ್ತಿದವರು, ಈಗ ಯಾವುದೇ ಅವಘಡ ಸಂಭವಿಸಿದರು, ಏನೇ ತೊಂದರೆ, ಸಮಸ್ಯೆ ಎದುರಾದರು ಮಾತೇ ಆಡುತ್ತಿಲ್ಲ ಎಂಬುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಏಕೆಂದರೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಹಣೆ ಲೋಪ ಪದೇ ಪದೇ ತಾಲೂಕಿನ ಜನರ ತಾಳ್ಮೆ ಕೆಡಿಸುತ್ತಿದೆ. ಎಲ್ಲದರಲ್ಲಿ ಕೆಟ್ಟು ನಿಲ್ಲುವ ಬಸ್ಸುಗಳು ಪ್ರಯಾಣಿಕರನ್ನು ನಿಗದಿತ ಸಮಯಕ್ಕೆ ಕರೆದೊಯ್ಯಲು ವಿಫಲವಾಗಿ, ಇದರಿಂದಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರು ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.
ಇದಕ್ಕೆ ಪೂರಕ ಎಂಬಂತೆ ಇಂದು (ಗುರುವಾರ) ಸಂಜೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ಸಂಭವಿಸಬಹುದಾಗಿದ್ದ ಪ್ರಮಾದ ಸಾರ್ವಜನಿಕರ ಕಾಳಜಿಯಿಂದ ತಪ್ಪಿದೆ.
ಹೌದು ಗೊರವನಹಳ್ಳಿ ಮತ್ತು ದೊಡ್ಡಬಳ್ಳಾಪುರ ನಡುವೆ ಸಂಚರಿಸುವ ರೂಟ್ ನಂಬರ್ 40 ರ ಕೆಎಸ್‌ಆರ್‌ಟಿಸಿ ಬಸ್ ಇಂದು ಸಂಜೆ ಗೊರವನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ವೇಳೆ ಮಾರ್ಗ ಮದ್ಯದಲ್ಲಿ ಎನ್‌ರಾಡ್ ಕಟ್ ಆಗಿದ್ದು ಆತಂಕವನ್ನು ಸೃಷ್ಟಿಸಿದೆ.
ದೊಡ್ಡಬಳ್ಳಾಪುರ ಹೊಸಹಳ್ಳಿ ನಡುವಿನ ದೊಡ್ಡಹಳ್ಳದ ಬಳಿ ಬಸ್ ಎನ್‌ರಾಡ್ ಕಟ್ಟಾದರು ಸಾಗುತ್ತಿರುವುದನ್ನು ಕಂಡ ಮೊಪೆಡ್‌ನಲ್ಲಿ ಸಾಗುತ್ತಿದ್ದವರು ಚಾಲಕನ ಗಮನಕ್ಕೆ ತಂದಿದ್ದಾರೆ. ಕೂಡಲೇ ಚಾಲಕ ಬಸ್ಸನ್ನು ನಿಲ್ಲಿಸಿದ್ದಾರೆ.
ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಚಾಲಕ ಬಸ್ ನಿಲ್ಲಿಸದೇ ಹೋಗಿದ್ದರೆ, ಬಸ್ ನಿಯಂತ್ರಣ ತಪ್ಪಿ ದೊಡ್ಡ ಮಟ್ಟದ ಅವಘಡ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರಯಾಣಿಕರು ಆತಂಕ ತೋಡಿಕೊಂಡಿದ್ದಾರೆ.
ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬದಲಿ ಬಸ್ ಮೂಲಕ ಕಳುಹಿಸಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸಂಚರಿಸುತ್ತಿರುವ ಬಹುತೇಕ ಬಸ್ಸುಗಳು ಲಕ್ಷಾಂತರ ಕಿಮೀ ಪ್ರಯಾಣಿಸಿ ಬಸವಳಿದವುಗಳಾಗಿದ್ದು, ಅವುಗಳಿಗೆ ಬಣ್ಣ ಬಳಿದು ಗ್ರಾಮಾಂತರ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ ಎಂಬುದು ಬಹುತೇಕರ ಆರೋಪವಾಗಿದೆ.
ಈ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ದೂರು ನೀಡಲು ವಿದ್ಯಾರ್ಥಿಗಳು ಸಿದ್ದತೆ ನಡೆಸಿದ್ದಾರೆಂದು ತಿಳಿದುಬಂದಿದೆ.