ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲ ಖಾಸಗಿ ಚಾನಲ್‌ಗಳು (Private channels) ಊಹಾಪೋಹ ವರದಿಗಳಿಗೆ ಹೆಚ್ಚು ಮಹತ್ವ ನೀಡಿ ವೀಕ್ಷಕರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂಬ ಆಕ್ರೋಶ ವ್ಯಾಪಕವಾಗಿದೆ.
ಇದಕ್ಕೆ ಪೂರಕ ಎಂಬಂತೆ ಖಾಸಗಿ ಸುದ್ದಿವಾಹಿನಿಯೊಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರು ಶಿಸ್ತು ಉಲ್ಲಂಘನೆ ಮಾಡಲ್ಲ, ವಾಪಾಸ್ ಪಕ್ಷಕ್ಕೆ ಬರುತ್ತೇನೆ ಎಂದು ಕೇಂದ್ರ ಶಿಸ್ತು ಸಮಿತಿಗೆ ಪತ್ರ ಬರೆದಿದ್ದಾರೆ ಎಂದು ವರದಿ ಮಾಡಿದೆ.
ಈ ಕುರಿತು ಕೆರಳಿರುವ ಬಸನಗೌಡ ಪಾಟೀಲ್ ಯತ್ನಾಳ್ ಟ್ವಿಟ್ ಮಾಡಿದ್ದು, ರಾಜಕೀಯ ನಿರ್ಧಾರದ ಬಗ್ಗೆ ಚರ್ಚಿಸಬೇಕಿದ್ದರೆ ಖಾಸಗಿ ಚಾನಲ್ ಅವರು ನನಗೆ ನೇರ ಕರೆ ಮಾಡಿ ನನ್ನ ನಿಲುವನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಬಹುದಾಗಿತ್ತು, ಇಲ್ಲವೇ ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿತ್ತು.
ಡೆಸ್ಕ್ ನಲ್ಲಿ ಕೂತು ಕಾಗಕ್ಕ-ಗುಬ್ಬಕ್ಕನ ಕಥೆ ಬರೆದು ತಪ್ಪು ಸಂದೇಶ ನೀಡುವ ಅಗತ್ಯವಿರಲಿಲ್ಲ.
ಬಿಜೆಪಿ ವರಿಷ್ಠರಿಗೆ ನಾನು ಯಾವುದೇ ಪತ್ರವಾಗಲಿ, ದೂರವಾಣಿ ಮೂಲಕ ಸಂಪರ್ಕಿಸಿದ್ದಾಗಲಿ ಮಾಡಿಲ್ಲ. ಇಲ್ಲಸಲ್ಲದ, ಊಹಾ ಪೋಹದ ವರದಿಯನ್ನು ಮಾಡಬೇಡಿ ಎಂದು ಹೇಳಿದ್ದಾರೆ.