ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆಯ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ಚಿಲಿಪಿಲಿ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿರುವ ಮಕ್ಕಳು ಇಂದು ನಗರದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ (Doddaballapura Rural Police Station) ಭೇಟಿ ನೀಡಿ, ಪೊಲೀಸರ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದರು.
ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಅನುಸರಿಸಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

ಅಂತಿಮವಾಗಿ ಪೊಲೀಸರೊಂದಿಗೆ ಮಕ್ಕಳು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ತೆರೆದ ಮನೆ ಕಾರ್ಯಕ್ರಮ
ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗಳ ಎಲ್ಲಾ ಠಾಣೆಯಲ್ಲಿ “ತೆರೆದ ಮನೆ’ ಎಂಬ ನೂತನ ಕಾರ್ಯಕ್ರಮ ಶುರುವಾಗಿದ್ದು, ಪೊಲೀಸರೆಂದರೆ ಜನಸಾಮಾನ್ಯರಲ್ಲಿ ಇರುವ ಭಯವನ್ನು ಚಿವುಟಿ ಹಾಕುವ ಮಹತ್ವದ ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಪರಿವರ್ತಿಸಲಾಗಿದೆ. ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪೊಲೀಸ್ ಠಾಣೆ ಮತ್ತು ಪೊಲೀಸ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡಲಾಗುತ್ತದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						