ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾದರಿಯಾಗಿದ್ದ ದೊಡ್ಡಬಳ್ಳಾಪುರ ನಗರಸಭೆ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದ್ದು, ನಗರಸಭೆ ಆಡಳಿತ ಮಂಡಳಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿ ಎಂಬ ಆರೋಪ ವ್ಯಾಪಕವಾಗಿದೆ.
ಇದಕ್ಕೆ ಪೂರಕ ಎಂಬಂತೆ ನಗರಸಭೆಯ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಭ್ರಷ್ಟ ಅಧಿಕಾರಿಗಳು ಇ-ಖಾತೆಗೆ ಅರ್ಜಿ ಸಲ್ಲಿಸಿದ ಅರ್ಜಿದಾರರನ್ನು ಅಲೆದಾಡಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಕನ್ನಡ ಪಕ್ಷದ ವತಿಯಿಂದ ನಗರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಕಾರ್ಯದರ್ಶಿ ಡಿ.ಪಿ.ಅಂಜನೇಯ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ಯಾವುದೇ ಕೆಲಸಗಳು ಆಗಬೇಕಿದ್ದರು ಮಧ್ಯವರ್ತಿಗಳ ಮೂಲಕ ಹೋದರೆ ಮಾತ್ರ ಶೀಘ್ರವಾಗಿ ಆಗಲಿದೆ.
ಇ-ಖಾತೆಗೆ ಫಲಾನುಭವಿಗಳೆ ನೇರವಾಗಿ ಅರ್ಜಿಗಳನ್ನು ಸಲ್ಲಿಸಿದರೆ ಕಚೇರಿಗೆ ತಿಂಗಳುಗಟ್ಟಲೆ ಅಲೆದಾಡಿದರು ಕೆಲಸ ಆಗುವುದಿಲ್ಲ. ನಾವು ಸಲ್ಲಿಸುವ ಅರ್ಜಿಗಳೆ ಕಳೆದು ಹೋಗುತ್ತಿವೆ ಎಂದು ದೂರಿದರು.
2009ರಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭವಾದಾಗ ಇದು ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಕನ್ನಡ ಪಕ್ಷದ ವತಿಯಿಂದ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಿ ಪ್ರತಿಭಟಿಸಲಾಗಿತ್ತು. ಅಂದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಗರೀಕರು ಇಂದು ಇಡೀ ಶಾಪ ಹಾಕುವಂತಾಗಿದೆ.
ನಗರಸಭೆಯಲ್ಲಿ ಜನರ ಬಗ್ಗೆ ನಿರ್ಲಕ್ಷ್ಯ ಮತ್ತು ಭ್ರಷ್ಟಚಾರ ನಡೆಯುತ್ತಿದ್ದರೂ ಯಾರೂ ಸಹ ಈ ಬಗ್ಗೆ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ. ರಾಜ್ಯದ ಇತರೆ ಇಲಾಖೆಗಳಂತೆ ನಗರಸಭೆಯಲ್ಲೂ ಇ-ಕಚೇರಿ ಮೂಲಕವೇ ಅರ್ಜಿಗಳನ್ನು ಪಡೆದು ಕೆಲಸ ನಿರ್ವಹಿಸುವಂತೆ ಆಗಬೇಕು. ಇದರಿಂದ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಕಳೆದು ಹೋಗುವುದು ತಪ್ಪಲಿದೆ ಹಾಗೂ ಕಾಲ ಮಿತಿಯಲ್ಲಿ ಕೆಲಸಗಲೂ ನಡೆಯಲು ಸಹಕಾರಿಯಾಗಲಿದೆ.
ನಗರಸಭೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಂದಾಯ, ಆರೋಗ್ಯ ವಿಭಾಗದಲ್ಲಿ ದಶಕಗಳಿಂದಲು ಇಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವರ್ಗವಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಜಿಲ್ಲಾ ಅಧ್ಯಕ್ಷ ಮುನಿಪಾಪಯ್ಯ, ಪರಮೇಶ್, ರಮೇಶ್, ಮುನಿಶಾಮಿ, ವೆಂಕಟೇಶ್ ಮತ್ತಿತರರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						