ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದಕ್ಕೆ ಕನ್ನಡಿಗರನ್ನು ಉಗ್ರರಿಗೆ ಹೋಲಿಸಿದ್ದಲ್ಲದೇ, ಅದನ್ನೇ ಸಮರ್ಥನೆ ಮಾಡುತ್ತಿದ್ದ ಗಾಯಕ ಸೋನು ನಿಗಮ್ ಗೆ (Sonu nigam) ಕನ್ನಡಿಗರ ಆಕ್ರೋಶದ ಬಿಸಿ ತಟ್ಟಿದೆ.
ತೀವ್ರ ಆಕ್ರೋಶ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಿಂದ ಅಸಹಕಾರ ತೋರಲು ನಿರ್ಧರಿಸಲಾದ ಬೆನ್ನಲ್ಲೇ ಗಾಯಕ ಸೋನು ನಿಗಮ್ ಅವರು ಕರ್ನಾಟಕದ ಕ್ಷಮೆ ಕೇಳಿದ್ದಾರೆ.
ಈ ಕುರಿತು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿರುವ ಅವರು, ಕ್ಷಮಿಸಿ ಕರ್ನಾಟಕ. ನಿಮ್ಮ ಮೇಲಿರುವ ಪ್ರೀತಿ, ನನ್ನ ಅಹಂಗಿಂತ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ಕನ್ನಡ ಚಿತ್ರರಂಗದಿಂದ ಬಹಿಷ್ಕಾರದ ಒತ್ತಡದ ನಡುವೆಯೂ ಸೋನು ತಮ್ಮ ಕನ್ನಡದ ಬಗ್ಗೆ ಇರುವ ಪ್ರೀತಿಯನ್ನು ಮತ್ತೊಮ್ಮೆ ಒತ್ತಿಹೇಳಿದ್ದಾರೆ.