ಹೌರಾ: ಅನಾರೋಗ್ಯದಿಂದ ಮಡಿದ ಪ್ರೇಯಸಿಯ ಹಣೆಗೆ ಸಿಂಧೂರವಿಟ್ಟು ಪತ್ನಿ ಸ್ಥಾನ ನೀಡುವ ಮೂಲಕ, ಪ್ರೀತಿಗೆ (Love) ಸಾವಿಲ್ಲ ಎಂಬ ಸಂದೇಶ ಸಾರಿರುವ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸಂಕ್ರೈಲ್‌ನಲ್ಲಿ ನಡೆದಿದೆ.
ಅನಾರೋಗ್ಯದಿಂದ ಮೃತ ಯುವತಿಯನ್ನು ಮೌಲಿ ಮಂಡಲ್ (23 ವರ್ಷ) ಎಂದು ಗುರುತಿಸಲಾಗಿದೆ.
ಮೌಲಿ ಮಂಡಲ್ ಮತ್ತು ಸಾಗರ್ ಬಾರಿಕ್ ಶಾಲಾ ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ 2023 ರಲ್ಲಿ ಮೌಲಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಬಳಿಕ ಆಕೆಯನ್ನು ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು ಚೇತರಿಸಿಕೊಳ್ಳುತ್ತಿದ್ದಳು.
ಮೌಲಿ ಮಂಡಲ್ ಚೇತರಿಕೆಯಿಂದಾಗಿ ಕುಟುಂಬಸ್ಥರು ಆಕೆಯ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದರು.
ಆದಾಗ್ಯೂ ಮೂರು ತಿಂಗಳ ಹಿಂದೆ ಕಾಯಿಲೆ ಮರುಕಳಿಸಿತು ಮತ್ತು ಮೌಲಿ ಮಂಡಲ್ ಅವರನ್ನು ಮತ್ತೆ ಸ್ಯಾನಿಟೋರಿಯಂಗೆ ಕರೆದೊಯ್ಯಲಾಯಿತು. ಈ ವೇಳೆ ಆಕೆಯ ಪರಿಸ್ಥಿತಿ ಹದಗೆಟ್ಟಿದ್ದು, ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಆಕೆ ಕೊನೆಯುಸಿರೆಳೆದಳು.
ಆದರೆ ಪ್ರೀತಿ ಎಂದಿಗೂ ಸಾಯುವುದಿಲ್ಲ. ಮೌಲಿ ಮಂಡಲ್ ಅನಾರೋಗ್ಯದ ಸಮಯದಲ್ಲಿ ಯಾವಾಗಲೂ ಪಕ್ಕದಲ್ಲಿದ್ದ ಸಾಗರ್, ಅವರ ಸಂಬಂಧಕ್ಕೆ ಅರ್ಹವಾದ ಗೌರವ ಮತ್ತು ಪ್ರಬುದ್ಧತೆಯನ್ನು ನೀಡಲು ನಿರ್ಧರಿಸಿದನು.
ಮೌಲಿ ಮಂಡಲ್ಗೆ ಬಂಗಾಳಿ ವಧುವಿನ ಶೈಲಿಯ ಕೆಂಪು ಬನಾರಸಿ ಸೀರೆ, ಶಂಖದ ಬಳೆಗಳು, ಗುಲಾಬಿ ಹಾರ ಮತ್ತು ಹಣೆಯ ಮೇಲೆ ಸಿಂಧೂರವನ್ನು ಇಟ್ಟು, ಪ್ರತಿ ವಧುವೂ ತನ್ನ ತಾಯಿಯ ಮನೆಗೆ ವಿದಾಯ ಹೇಳುವಂತೆ, ಮೌಲಿ ಮಂಡಲ್ ಪಾರ್ಥಿವ ಶರೀರವನ್ನು ಸಾಗರ್ ಅವರ ಮನೆಗೆ ಕೊಂಡೊಯ್ದಿದ್ದಾನೆ. ಅಲ್ಲಿಂದ ಆಕೆಯ ಅಂತಿಮ ಯಾತ್ರೆ ಪ್ರಾರಂಭವಾಗಿದೆ.
ಈ ಮೂಲಕ ಆಕೆಯ ಕೊನೆಯ ಆಸೆಯನ್ನು ಈಡೇರಿಸಿದ್ದಾನೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾಗರ್, ನಾವು ಗುಲಾಬಿಗಳ ಹಾರ ಧರಿಸಿ ಮದುವೆಯಾಗಬೇಕೆಂದು ಬಯಸಿದ್ದೆವು. ಅವಳು ನನ್ನೊಂದಿಗೆ ಇರಬೇಕೆಂದು ಬಯಸಿದ್ದಳು, ಆದರೆ ಸಾವು ಬಿಡಲಿಲ್ಲ. ಹಾಗಾಗಿ ನಾನು ಅವಳ ಕೊನೆಯ ಆಸೆಯನ್ನು ಪೂರೈಸಿದೆ ಎಂದು ಗದ್ಗದಿತನಾದನೆಂದು ವರದಿಯಾಗಿದೆ.