ದೊಡ್ಡಬಳ್ಳಾಪುರ (Doddaballapura): ಕನ್ನಡ ಜಾಗೃತಿ ವೇದಿಕೆ ತಾಲೂಕು ಮತ್ತು ಜಿಲ್ಲಾ ಘಟಕದ ವತಿಯಿಂದ ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರಿಗೆ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ದೀಪ ಹಚ್ಚುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನಾಗರಾಜ, ದೇಶಕ್ಕೆ ರೈತ ಎಷ್ಟು ಮುಖ್ಯನೋ ಸೈನಿಕರು ಸಹ ಅಷ್ಟೇ ಮುಖ್ಯ. ದೇಶಕ್ಕೆ ರೈತ ಬೆನ್ನೆಲುಬು. ಆದರೆ ದೇಶಕ್ಕೆ ಸೈನಿಕರು ಕಣ್ಣುಗಳಂತೆ ನಮ್ಮನ್ನು ಕಾಯುತ್ತಿರುತ್ತಾರೆ.
ಇತ್ತೀಚೆಗೆ ನಡೆದ ಪಹಲ್ಗಾಮ್ ನಲ್ಲಿ ಉಗ್ರರ ಹೀನ ಕೃತ್ಯವನ್ನು ನಾವು ಖಂಡಿಸುತ್ತೇವೆ. ಅದಕ್ಕೆ ಉತ್ತರವಾಗಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರು ಪಾಕಿಸ್ತಾನಕ್ಕೆ ಸರಿಯಾದ ಉತ್ತರವನ್ನು ನೀಡಿದ್ದಾರೆ. ಭಾರತೀಯ ನಾರಿಯರ ಶಕ್ತಿ ಏನೆಂಬುದು ತೋರಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ಮತ್ತಷ್ಟು ಕ್ರಮಗಳಿಗೆ ಮುಂದಾಗಿ ಉಗ್ರಗಾಮಿ ಸಂಘಟನೆಗಳನ್ನು ಬೇರು ಸಮೇತ ಕಿತ್ತು ಹಾಕಬೇಕೆಂದು ಒತ್ತಾಯಿಸಿದರು.
ಕನ್ನಡ ಜಾಗೃತ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್ ಮಾತನಾಡಿ, ಭಾರತ ದೇಶ ವಿಶ್ವಮಟ್ಟದಲ್ಲಿ ಮಟ್ಟದಲ್ಲಿ ಬೆಳೆಯುತ್ತಿರುವುದು ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ. ಅಲ್ಲದೆ ನಮ್ಮ ದೇಶದಲ್ಲಿ ಹಿಂದೂ,ಮುಸ್ಲಿಂ, ಅಣ್ಣ ತಮ್ಮಂದಿರಂತೆ ಇರುವುದು ಅವರಿಗೆ ಅಹನೀಯವಾಗಿದೆ.
ಈ ಹಿನ್ನೆಲೆಯಲ್ಲಿ ದೇಶದಲ್ಲಿ ವಿಷ ಬೀಜಗಳನ್ನು ಬಿತ್ತಿ, ದೇಶವನ್ನ ಹಾಳು ಮಾಡುವ ಕೆಲಸವನ್ನ ಈ ಉಗ್ರಗಾಮಿಗಳು ಮಾಡುತ್ತಿದ್ದಾರೆ. ಅಲ್ಲದೆ ನಾಗರೀಕರನ್ನು ಗುರಿಯಾಗಿರಿಸಿ ಹೀನಾಯ ಕೃತ್ಯಗಳನ್ನು ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದರು.
ಈ ವೇಳೆ ಕನ್ನಡ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಶಶಿಧರ, ತಾಲೂಕು ಉಪಾಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ಮಹದೇವ್, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಸುರೇಶ್ ಸಿಂಗಂ, ಶಿವಕುಮಾರ ಸ್ವಾಮಿ, ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ ಅಧ್ಯಕ್ಷ ಸುರೇಶ್. ಸಿ., ಸಂಘಟನಾ ಕಾರ್ಯದರ್ಶಿ ಮಂಜುನಾಥ್ ನಿಜಗಲ್, ಅನ್ನ ದಾಸೋಹಿ ಮಲ್ಲೇಶ್, ತಾಲೂಕು ಸಂಚಾಲಕರಾದ ಬಾಬು, ಪ್ರಸಾದ್, ಸಂಘಟನೆ ಕಾರ್ಯದರ್ಶಿ ರಜತ್, ಸತೀಶ್, ಉಮೇಶ್ ಮತ್ತಿತರರಿದ್ದರು.