ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷವನ್ನು ಪೂರ್ಣಗೊಳಿಸಿದೆ.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ (Congress) ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆ ರಾಜ್ಯ ಕಾಂಗ್ರೆಸ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ.
ಇದರ ನಡುವೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ದಿನಪತ್ರಿಕೆಗಳಲ್ಲಿ ಜಾಹೀರಾತು ವಾರ್ ಕೂಡಾ ನಡೆದಿದೆ.
ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ಜಾಹೀರಾತು ನೀಡಿರುವ ಕಾಂಗ್ರೆಸ್, ಪ್ರಗತಿಯತ್ತ ಕರ್ನಾಟಕ, ಸಮರ್ಪಣೆಯ ಸಂಕಲ್ಪ ಎರಡು ವರ್ಷಗಳ ಸಾಧನೆಯ ಸಮರ್ಪಣೆ ಮತ್ತಷ್ಟು ಜನಪರ ಸೇವೆಯ ಪ್ರತಿಜ್ಞೆ, ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಎಂದು ಹೊಗಳಿಕೊಂಡಿದೆ.
ಮತ್ತೊಂದೆಡೆ ರಾಜ್ಯ ಸರ್ಕಾರ ವೈಪಲ್ಯಗಳನ್ನು ಕೆದಕಿರುವ ಬಿಜೆಪಿ, ಜಾಹೀರಾತಿನಲ್ಲಿ ದುಬಾರಿ ಜೀವನ, ಅಭಿವೃದ್ಧಿ ಶೂನ್ಯ ಇದುವೇ ಕಾಂಗ್ರೆಸ್ ಸರ್ಕಾರ. ಬೆಲೆ ಏರಿಕೆಯ ಸಾಧನೆ, 50 ಕ್ಕೂ ಹೆಚ್ಚು ವಲಯುಗಳ ಬೆಲೆ ಏರಿಕೆ ಕರ್ನಾಟಕ ಲೂಟಿಯೇ ಕಾಂಗ್ರೆಸ್‌ನ ಡ್ಯೂಟಿ, ಹೆಜ್ಜೆ ಇಡದ ಎರಡು ವರ್ಷ, ಬೆಲೆ ಏರಿಕೆ, ಭ್ರಷ್ಟತೆಯ ಕರಾಳ ಸ್ಪರ್ಷ ಎಂದು ಬರೆದಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ಕಾಂಗ್ರೆಸ್‌ನ ಸಾಧನಾ ಸಮಾವೇಶದ ವಿರುದ್ಧ ಕಿಡಿ ಕಾರಿ, ಯಾವ ಪುರುಷಾರ್ಥಕ್ಕೆ ನೀವು ಸಾಧನಾ ಸಮಾವೇಶ ಮಾಡುತ್ತಿದ್ದೀರಿ? ನಿರಂತರವಾಗಿ ಬೆಲೆ ಏರಿಕೆ ಮಾಡುತ್ತ ಬಂದಿದ್ದೀರಿ. ರಾಜ್ಯದಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಸತತವಾಗಿ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವಿಟ್ ಮಾಡಿ, ನುಡಿದಂತೆ ನಡೆಯುವ ಪ್ರತಿಜ್ಞೆಯೊಂದಿಗೆ – ಪಂಚ ಗ್ಯಾರಂಟಿಗಳ ಕ್ರಾಂತಿಯೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಈ ಎರಡು ವರ್ಷ ಎಂದರೆ ಕೇವಲ ದಿನಗಳಲ್ಲ. ಇದು ಆರ್ಥಿಕಾಭಿವೃದ್ಧಿಯ ನಾಗಾಲೋಟದ ದಿನಗಳು, ಬಡ ಕುಟುಂಬಗಳಲ್ಲಿ ಆಶಾಕಿರಣ ತಂದ ದಿನಗಳು.
ದಿನಗೂಲಿ ಮಾಡುವ ಬಡವನೊಬ್ಬ ನಿರಾಳತೆಯಿಂದ ಸಂಭ್ರಮಿಸಿದ ದಿನಗಳು, ಗೃಹಿಣಿಯೊಬ್ಬಳು ಮನೆಗೆ ಬೇಕಾದ ವಸ್ತುಗಳನ್ನು ದುಡ್ಡು ಕೊಟ್ಟು ತಂದು ಸ್ವಾಭಿಮಾನದಿಂದ ಮುಗುಳ್ಳಗೆ ನಕ್ಕ ದಿನಗಳು.
ಇಂದು ಹೊಸಪೇಟೆಗೆ ಬನ್ನಿ, ಎರಡು ವರ್ಷಗಳ ಸಮರ್ಪಣಾ ಸಂಕಲ್ಪದಲ್ಲಿ ಸೇರೋಣ. ವಿಜಯನಗರದಿಂದ ನಾಡಿನ ಪ್ರಗತಿಯ ರಥಕ್ಕೆ ಮತ್ತಷ್ಟು ಶಕ್ತಿ ತುಂಬಿ ಎಳೆಯೋಣ ಎಂದಿದ್ದಾರೆ.